Advertisement

ಶೈಕ್ಷಣಿಕ ಯಶಸ್ಸಿಗೆ 5 ವರ್ಷಗಳ ಯೋಜನೆ ಇರಲಿ

11:01 PM Feb 25, 2020 | mahesh |

ಪರಿಚಯ
ನವೀನ್‌ ಭಟ್‌ ಅವರು ಮೂಲತಃ ಕುಂದಾಪುರದ ಅಮಾಸೆಬೈಲಿ ನವರು. ಬಂಟ್ವಾಳದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಉಮೇಶ್‌ ಭಟ್‌ ಮತ್ತು ವಿಜಯಲಕ್ಷ್ಮೀ ದಂಪತಿ ಪುತ್ರ. 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 37ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದರು. ಪ್ರಸ್ತುತ ಹಾಸನದಲ್ಲಿ ಅಸಿಸ್ಟೆಂಟ್‌ ಕಮಿಷನರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

Advertisement

- ಸಾಧನೆಗೆ ಸ್ಪೂರ್ತಿ ಯಾರು?
ಹೆತ್ತವರ ಜತೆಗೆ ಸ್ನೇಹಿತರು ಅಪಾರವಾಗಿ ಬೆಂಬಲಿಸಿದರು. ನಮ್ಮ ಬ್ಯಾಚ್‌ನಲ್ಲಿ 10 ಮಂದಿ ಗೆಳೆಯರಿದ್ದೆವು. ಎಲ್ಲರೂ ಕೂಡ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆವು. ಅದರಲ್ಲಿ ಇಬ್ಬರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆವು. ಸಮೂಹವಾಗಿ ಅಭ್ಯಾಸ ಹಾಗೂ ಸಮಸ್ಯೆಗಳ ನಿವಾರಣೆ ಮುಂತಾದ ಶೈಕ್ಷಣಿಕ ವಿಚಾರಗಳ ಚರ್ಚೆ ನಮ್ಮ ಸಾಧನೆಗೆ ಮತ್ತಷ್ಟು ಪ್ರೇರಣೆ ನೀಡಿತು.

- ಎಂಬಿಬಿಎಸ್‌ ಟು ಐಎಎಸ್‌ ಸೀಕ್ರೆಟ್‌ ಏನು?
ಡಾಕ್ಟರ್‌ ಹಾಗೂ ಐಎಎಸ್‌ ಎರಡೂ ಜನಸೇವೆಯೇ. ಡಾಕ್ಟರ್‌ ಆದರೆ ದಿನಕ್ಕೆ 8-10 ಮಂದಿಯೊಂದಿಗೆ ಮಾತ್ರ ಬೆರೆಯಬಹುದು. ಐಎಎಸ್‌ನಲ್ಲಿ ಹಾಗಲ್ಲ; ಜನರ ನಡುವೆ ಇದ್ದುಕೊಂಡು ಹಲವಾರು ರೀತಿಯ ಸಮಾಜಸೇವೆಗಳನ್ನು ಮಾಡಬಹುದು. ಜನಸೇವೆಗೆ ಡಾಕ್ಟರ್‌ ಹಾಗೂ ಐಎಎಸ್‌ನ ನಡುವೆ ತುಲನೆ ಮಾಡಿ ನೋಡಿದಾಗ ಐಎಎಸ್‌ ಆಗುವುದೇ ಶ್ರೇಷ್ಠವೆಂದು ಅನಿಸಿತು. ಹಾಗಾಗಿ ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡೆ.

- ಯುಪಿಎಸ್‌ಸಿ ಪರೀಕ್ಷೆಗೆ ಸಿದ್ದತೆ ಹೇಗಿದ್ದರೆ ಚೆನ್ನ?
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೊದಲು ಆತ್ಮವಿಶ್ವಾಸ ಇರಬೇಕು. ಜತೆಗೆ ಸೂಕ್ತ ಮಾರ್ಗದರ್ಶನವೂ ಸಿಗಬೇಕು. ಗುಂಪು ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಜ್ಞಾನ ಸಂಪಾದನೆಯಾಗಲು ಸಾಧ್ಯವಿದೆ. ಕೆೆಎಎಸ್‌ ಪರೀಕ್ಷೆ ಬರೆಯಬೇಕೆಂದಿದ್ದರೂ ನಿಮ್ಮ ಸಿದ್ದತೆ ಐಎಎಸ್‌ನಂತಿರಬೇಕು. ಇದರಿಂದ ನಿಮ್ಮ ಸಾಧನೆಯನ್ನು ಮತ್ತಷ್ಟು ಸುಲಭವಾಗಿ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ದ.ಕ., ಉಡುಪಿ ಭಾಗದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮನಸ್ಸು ಮಾಡಿಕೊಳ್ಳಬೇಕು.

- ಯಶಸ್ಸಿನ ಮೂಲಸೂತ್ರ ಯಾವುದು?
ನಾವು ಏನು ಆಗಬೇಕೆಂದು ನಿರ್ಧಾರ ಮಾಡಿಕೊಂಡಿರುತ್ತೇವೋ ಅದನ್ನು ಸಾಧಿಸುವ ಛಲವಿರಬೇಕು. ಅದಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಳ್ಳಬೇಕು. ಬಂಡವಾಳ ಹೂಡಿಕೆ ಸಹಿತ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮಾಡುವ ಪ್ಲ್ರಾನ್‌ನಂತೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ 5 ವರ್ಷಗಳ ಯೋಜನೆಗಳನ್ನು ನಿರ್ದಿಷ್ಟ ಗುರಿಯಿರಿಸಿಕೊಂಡು ಹಾಕಬೇಕು. ಈ ರೀತಿ ಮಾಡುವುದರಿಂದ ನಮ್ಮ ಗುರಿಯನ್ನು ಶೀಘ್ರದಲ್ಲಿ ಸಾಧಿಸಲು ಸಹಾಯವಾಗುತ್ತದೆ.

Advertisement

- ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್‌ ಅಗತ್ಯವೇ?
ನಾವು ಸಂಪಾದಿಸಿರುವ ಜ್ಞಾನಕ್ಕೆ ಪೂರಕ ಅಂಶಗಳನ್ನು ಕೋಚಿಂಗ್‌ ಮೂಲಕ ತಿಳಿದುಕೊಳ್ಳಬಹುದು. ಶೇ.50 ಕೋಚಿಂಗ್‌ ಅಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಶೈಕ್ಷಣಿಕ ಸಂಸ್ಥೆಗಳು ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಕೋಚಿಂಗ್‌ನಿಂದಷ್ಟೇ ನಾವು ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಲು ಸಾಧ್ಯವಿಲ್ಲ. ಇದಕ್ಕೆ ಬೇಕಿರುವ ಪೂರ್ವ ತಯಾರಿಗಳನ್ನು ಮೊದಲೇ ಮಾಡಿಕೊಂಡರೆ ಮಾತ್ರ ಉತ್ತಮ ಫ‌ಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ.

- ಒತ್ತಡದ ವೃತ್ತಿ ಜೀವನದಲ್ಲಿ ಹೇಗೆ ಸಮಚಿತ್ತ ಕಾಪಾಡಿಕೊಳ್ಳಬೇಕು ?
ಬೆಳಗ್ಗಿನ ಜಾವ ರನ್ನಿಂಗ್‌ ಮತ್ತು ಓದು ಒತ್ತಡದ ವೃತ್ತಿ ಬದುಕಿಗೆ ಅಣಿಗೊಳಿಸುತ್ತವೆ. ಓದು ಎಂಬುದು ಖಾಸಗಿಯಾಗಿ ಜ್ಞಾನ ವೃದ್ಧಿಗೆ ದಾರಿ ಮಾಡಿಕೊಟ್ಟರೆ, ವೃತ್ತಿ ಬದುಕಿನ ನಾನಾ ಸಂದರ್ಭಗಳಲ್ಲಿ ಇದೇ ಓದು ಕೈ ಹಿಡಿಯುತ್ತದೆ.

- ನಿಮ್ಮ ಪ್ರಕಾರ ವೃತ್ತಿ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳಲು ಪಾಲಿಸಬೇಕಾದ ನಿಯಮ ?
ನಾನು, ನನ್ನದು ಎಂಬ ಅಹಂ ತೊರೆದು, ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸತ್ಯವನ್ನು ಅರಿತುಕೊಂಡರೆ ಜನರನ್ನು ತಿಳಿಯುವ ಸದವಕಾಶ ದೊರೆಯುತ್ತದೆ. ಈ ಮೂಲಕ ಸಾಮಾಜಿಕವಾಗಿ ನಮ್ಮನ್ನು ನಾವು ಮುಕ್ತವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿ ವೃತ್ತಿ ಬದುಕು ನಿರ್ದಿಷ್ಟ ಪಥದಲ್ಲಿ ಸಾಗಲು ನೆರವಾಗುತ್ತದೆ.

  ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next