Advertisement

ಹಾವಂಜೆ-ಪೆರ್ಡೂರು ರಸ್ತೆಯಲ್ಲಿ ಸವಾರರಿಗೆ ಪ್ರಾಣ(ಣಿ)ಭೀತಿ

06:00 AM Sep 28, 2018 | Team Udayavani |

ಉಡುಪಿ: ನಗರದ ಹೊರ ವಲಯದಲ್ಲಿರುವ ಹಾವಂಜೆ- ಪೆರ್ಡೂರು ಮುಖ್ಯರಸ್ತೆಯಲ್ಲಿ ಓಡಾಡುವ ವಾಹನ ಚಾಲಕರಿಗೆ, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಪ್ರಾಣ(ಣಿ) ಭಯ. ಜಿಂಕೆ, ಚಿರತೆ ಮತ್ತು ಹಂದಿಗಳ ಹಾವಳಿಯಿಂದ ಈ ರಸ್ತೆಯಲ್ಲಿ ಓಡಾಡುವವರು ನಿತ್ಯ ಆತಂಕಿತರಾಗಿದ್ದಾರೆ. ರಾತ್ರಿ ವೇಳೆಯಲ್ಲಂತೂ ಈ ದಾರಿಯ ಸಹವಾಸವೇ ಬೇಡ ಎನ್ನುವಂತಾಗಿದೆ. 
 
ಕಳೆದ ಐದಾರು ವರ್ಷಗಳಿಂದ ಇಲ್ಲಿನ ಸವಾರರನ್ನು, ದಾರಿಹೋಕರನ್ನು ಅತಿಯಾಗಿ ಕಾಡುತ್ತಿರುವುದು ಪಕ್ಕದ ಕಾಡಿನಲ್ಲಿರುವ ಜಿಂಕೆಗಳು. ಕೆಲವು ತಿಂಗಳುಗಳ ಹಿಂದೆ ಜಿಂಕೆಯ ತಿವಿತಕ್ಕೆ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿ ಜಿಂಕೆಗೆ ಢಿಕ್ಕಿ ಹೊಡೆದು  ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಅನೇಕರು ಕೂದಲೆಳೆ ಅಂತರದಿಂದ ಬಚಾವಾಗಿದ್ದಾರೆ. ಜಿಂಕೆ ಓಡಾಟ ದಿಂದಾಗಿ ಇಬ್ಬರು ಜೀವ ಕಳೆದು ಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.
 
ಮೀಸಲು ಅರಣ್ಯ ಪ್ರದೇಶ 
ಹಾವಂಜೆ-ಪೆರ್ಡೂರು ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದ್ದು ಮೀಸಲು ಅರಣ್ಯದಲ್ಲಿ ಹಾದು ಹೋಗುತ್ತದೆ. ರಸ್ತೆಯೂ ಉತ್ತಮ ವಾಗಿರುವುದರಿಂದ ವಾಹನ ಸವಾರರು ವೇಗವಾಗಿ ಹೋಗುತ್ತಾರೆ. ಈ ರಸ್ತೆಯ ಶೇಡಿಗುಳಿ-ಗೋಳಿಕಟ್ಟೆ ನಡುವಿನ ಪ್ರದೇಶದಲ್ಲಿ ಜಿಂಕೆಗಳ ಓಡಾಟ ಹೆಚ್ಚಿದ್ದು ಶೇಡಿಗುಳಿಯ ಎಡಭಾಗದ ಎತ್ತರದ ಸ್ಥಳದಿಂದ ಜಿಂಕೆಗಳು ರಸ್ತೆಗೆ ಜಿಗಿಯುತ್ತವೆ. ಕೆಲವೊಮ್ಮೆ ಎರಡೂ ಬದಿಗಳಿಂದಲೂ ಜಿಂಕೆಗಳ ಓಡಾಟ ಇರುತ್ತದೆ. ಧುತ್ತನೆ ಅಡ್ಡಬರುವ ಜಿಂಕೆಗಳ ಕೊಂಬಗಳು ವಾಹನ ಅಥವಾ ಸವಾರರಿಗೆ ಚುಚ್ಚಿ ಅಪಘಾತಕ್ಕೆ ಕಾರಣವಾಗುತ್ತವೆ. ಈ ಭಾಗದಲ್ಲಿ ಎರಡು ದೊಡ್ಡ ಜಿಂಕೆಗಳು ಹಾಗೂ 25ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಗಾತ್ರದ ಜಿಂಕೆಗಳಿವೆ ಎನ್ನುತ್ತಾರೆ ಸ್ಥಳೀಯರು. 

Advertisement

“ಇಲ್ಲಿ ಹಗಲಿನಲ್ಲೇ ಜಿಂಕೆ, ಚಿರತೆಗಳು ತಿರುಗಾಡುತ್ತವೆ. ಏಕಾಏಕಿ ಅವುಗಳು ರಸ್ತೆಗೆ ಬರುವಾಗ ದಿಕ್ಕು ತೋಚದಂತಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ರಮೇಶ್‌ ಪೂಜಾರಿ. 

ಚಿರತೆ ಸಮಸ್ಯೆಯೂ ಇದೆ
ಜಿಂಕೆ ಮಾತ್ರವಲ್ಲ ಇಲ್ಲಿ ಹಂದಿ, ಚಿರತೆಯೂ ಇದೆ. ಕಳೆದ ಸೋಮವಾರ ರಾತ್ರಿ ಹಂದಿ ಅಡ್ಡಬಂದು ಅಪಘಾತವಾಗಿತ್ತು. ಇದಕ್ಕೂ ಮೊದಲು ಚಿರತೆ ಕಾರಿಗೆ ಎಗರಿ ಗಾಜು ಪುಡಿಯಾಗಿತ್ತು. ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಅವರು ಬದುಕಿದ್ದೇ ಹೆಚ್ಚು ಎನ್ನುತ್ತಾರೆ ಸ್ಥಳೀಯರಾದ ಶಂಕರ ಶೆಟ್ಟಿ ಹಾವಂಜೆ ಅವರು.

ಇಲಾಖೆ ನಕಾರ
ಇಲ್ಲಿನ ಸುಮಾರು 1,400 ಮೀಟರ್‌ ಉದ್ದಕ್ಕೆ ಸುಮಾರು 40.60 ಲ.ರೂ. ವೆಚ್ಚದಲ್ಲಿ ಬೇಲಿ(ಮೆಶ್‌ ಫೆನ್ಸಿಂಗ್‌) ಮಾಡಲು ಸ್ಥಳೀಯ ಅರಣ್ಯ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದರು. ಆದರೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳು ಇದಕ್ಕೆ ಒಪ್ಪಲಿಲ್ಲ. ಬೇಲಿ ಮಾಡುವುದರಿಂದ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗಲಿದೆ ಎಂದು ಅವರು ಹೇಳಿರುವುದರಿಂದ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಕಡಿಮೆಯಾಗಿವೆ. ಸದ್ಯ ಇಲ್ಲಿ ವನ್ಯಪ್ರಾಣಿಗಳ ಓಡಾಟ ಬಗ್ಗೆ ಎಚ್ಚರಿಕೆ ನಾಮಫ‌ಲಕ ಮಾತ್ರ ಇದೆ.  

 ಮೀಸಲು ಅರಣ್ಯ ಮಾಡಬಾರದಿತ್ತು 
ಜಿಂಕೆ ಓಡಾಟದಿಂದಾಗಿ ಎರಡು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಲೆಕ್ಕವೇ ಇಲ್ಲ. “ಬೇಲಿ ನಿರ್ಮಿಸಿದರೆ ಜಿಂಕೆಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ’ ಎಂದು ಅರಣ್ಯಾಧಿಕಾರಗಳು ಉತ್ತರಿಸುತ್ತಿದ್ದಾರೆ. ಹಾಗಾದರೆ ಜನರ ಜೀವಕ್ಕಿಂತ ಪ್ರಾಣಿಗಳ ಜೀವವೇ ಹೆಚ್ಚಾಯಿತೆ? ಜನವಸತಿ ಪ್ರದೇಶದಲ್ಲಿ ಮೀಸಲು ಅರಣ್ಯ ಮಾಡಿರುವುದು ತಪ್ಪು.   
– ಜನಾರ್ದನ ತೋನ್ಸೆ,
ಜಿ.ಪಂ. ಸದಸ್ಯರು 

Advertisement

ಎಲ್ಲೆಲ್ಲಿಂದಲೂ ತಂದು ಬಿಡುತ್ತಾರೆ
ಗ್ರಾ.ಪಂ., ಅರಣ್ಯಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ಕೊಟ್ಟಿದ್ದೇವೆ. ಮೀಸಲು ಅರಣ್ಯವಾಗಿರುವುದರಿಂದ ಎಲ್ಲೆಲ್ಲಿಂದಲೋ ಜಿಂಕೆ, ಚಿರತೆ, ಮಂಗಗಳನ್ನು  ಇಲ್ಲಿ ತಂದು ಬಿಡುತ್ತಾರೆ. ಶೇಡಿಗುಳಿಯಲ್ಲಿ ರಸ್ತೆಯ ಎಡಬದಿಯ ಎತ್ತರದ ಜಾಗವನ್ನು ಸ್ವಲ್ಪ ಸಮತಟ್ಟುಗೊಳಿಸಿದರೆ ಸ್ವಲ್ಪ ದೂರದಿಂದಲೇ ವನ್ಯಪ್ರಾಣಿ ಬರುವಾಗ ಗೊತ್ತಾಗಿ ವಾಹನ ನಿಧಾನ ಮಾಡಬಹುದು. ಬೇಲಿ ನಿರ್ಮಾಣವೇ ಪರಿಹಾರ.  
– ರತ್ನಾಕರ ಮೊಗವೀರ
ಸ್ಥಳೀಯರು 

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next