ಹೀರೋ ಆಗೋಕೆ ಬಂದವರು ಅಮಿತ್ ರಾಜ್. ಯಾಕೋ ಹೀರೋ ಆಗಲಿಲ್ಲ. ಕ್ರಮೇಣ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇದೀಗ ಅವರು ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ “ಹವಾಲ’ ಎಂಬ ಚಿತ್ರವನ್ನು ನಿರ್ದೇಶಿಸಿರುವ ಅವರು, ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಟೀಸರ್ ತೋರಿಸುವ ನೆಪದಲ್ಲಿ ಪತ್ರಿಕಾಗೋಷ್ಠಿಯೂ ನಡೆಯಿತು.
“ಹವಾಲ’ ಪ್ರಮುಖವಾಗಿ ಎರಡು ಪಾತ್ರಗಳ ಸುತ್ತ ಸುತ್ತುವ ಚಿತ್ರವಂತೆ. “ಇಲ್ಲಿ ಎರಡು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಒಬ್ಟಾತ ಮಸ್ಕಲ್ ಭಾಯ್ ಅಂತ. ಇನ್ನೊಬ್ಬನ ಹೆಸರು ನಾಮ. ಒಬ್ಬ ಕಾಂಟ್ರ್ಯಾಕ್ಟ್ ಕಿಲ್ಲರ್. ಇನ್ನೊಬ್ಬ ಅಂಡರ್‌ವರ್ಲ್ಡ್ನಲ್ಲಿ ದೊಡ್ಡ ಹೆಸರು ಮಾಡಬೇಕು ಅಂತ ಆಸೆ ಇಟ್ಟುಕೊಂಡಿರುತ್ತಾರೆ. ಇಬ್ಬರೂ ಹವಾಲ ದಂಧೆಗೆ ಕೈಹಾಕುತ್ತಾರೆ. ಆ ನಂತರ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಸಾರಾಂಶ. ಇಡೀ ಚಿತ್ರದಲ್ಲಿ ಯಾರೂ ಒಳ್ಳೆಯವರಲ್ಲ. ಎಲ್ಲರೂ ಕೆಟ್ಟವರೇ. ಭೂಗತಲೋಕದ ಕಥೆ ಇರುವ ಚಿತ್ರ ಇದು. ಆದಷ್ಟು ರಿಯಲಾಸ್ಟಿಕ್ ಆಗಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರವನ್ನು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ಚಿತ್ರದ ಸಾರಾಂಶ ಬಿಚ್ಚಿಟ್ಟರು ಅಮಿತ್ ರಾಜ್.
ಎಲ್ಲಾ ಸರಿ, ಅಮಿತ್ ರಾಜ್ ನಿರ್ದೇಶನಕ್ಕೆ ಕೈಹಾಕಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಬಂತು. “ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ಹೀರೋ ಆಗಬೇಕು ಅಂತ ಬಂದವನು. ಆದರೆ, ಇಲ್ಲಿ ನೆಲೆ ಕಂಡುಕೊಳ್ಳೋದು ಕಷ್ಟ. ಆ ನಂತರ ಒಂಬತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡೆ. ಇಲ್ಲೇ ಬೇರೆ ಏನಾದರೂ ಮಾಡಬೇಕು ಅಂತಿತ್ತು. ಹಾಗಾಗಿ ಇದು ಸೆಕೆಂಡ್ ಇನ್ನಿಂಗ್ಸ್ ಎಂದರೆ ತಪ್ಪಿಲ್ಲ. ರಾಮ್ ಗೋಪಾಲ್ ವರ್ಮ ಅವರು ನನ್ನ ಗುರು ತರಹ. ಅವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡದಿದ್ದರೂ, ಅವರ ಸಿನಿಮಾಗಳೆಂದರೆ ನನಗೆ ಬಹಳ ಇಷ್ಟ. ಅದೇ ಮಾದರಿಯಲ್ಲಿ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಬಹಳ ದಿನಗಳಿಂದಲೂ ಇತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ’ ಎನ್ನುತ್ತಾರೆ ಅಮಿತ್ ರಾಜ್.
ಈ ಚಿತ್ರವನ್ನು ಪ್ರವೀಣ್ ಕುಮಾರ್ ಶೆಟ್ಟಿ ಎನ್ನುವವರು ನಿರ್ಮಿಸಿದ್ದಾರೆ. ಅವರು ಚಿತ್ರರಂಗದವರಲ್ಲ. ಅಮಿತ್ ರಾಜ್‌ಗೆ ಸಪೋರ್ಟ್ ಮಾಡುವ ಎಂದು ಚಿತ್ರರಂಗಕ್ಕೆ ಬಂದು ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಶ್ರೀನಿವಾಸ್, ಸಹನ, ಸೂರ್ಯೋದಯ್ ಮುಂತಾದವರು ನಟಿಸಿದ್ದಾರೆ. “ಉಪ್ಪು ಹುಳಿ ಖಾರ’ ಚಿತ್ರದ ಹಾಡೊಂದಕ್ಕೆ ಸಂಗೀತ ಸಂಯೋಜಿಸಿದ್ದ ಕಿಶೋರ್ ಅಕ್ಸ ಸಂಗೀತ ಸಂಯೋಜಿಸಿದ್ದಾರೆ. ಸದ್ಯಕ್ಕೆ ಚಿತ್ರವು ಡಿಟಿಎಸ್ ಮತ್ತು ಡಿಐ ಹಂತದಲ್ಲಿದ್ದು, ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.