ಬಸ್ರೂರು: ಬಹು ಬೇಡಿಕೆಯ ಬಸ್ರೂರು – ಹಟ್ಟಿಕುದ್ರು ಸೇತುವೆಯ ಕಾಮಗಾರಿ ಬಹುತೇಕ ಕೊನೆಯ ಹಂತದಲ್ಲಿದ್ದು, ಈ ಮಳೆಗಾಲಕ್ಕೆ ಮುನ್ನ ವಾಹನ ಸಂಚಾರ ಆರಂಭಗೊಳ್ಳಬಹುದೇ ಎನ್ನುವ ನಿರೀಕ್ಷೆ ಊರವರದ್ದಾಗಿದೆ.
ಕಳೆದ ಒಂದೂವರೆ ವರ್ಷದಿಂದ ಹಟ್ಟಿಕುದ್ರು ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದರೂ, ಕೊರೊನಾ, ಲಾಕ್ ಡೌನ್, ಕಾರ್ಮಿಕರು ಊರಿಗೆ ತೆರಳಿದ್ದು, ಮಳೆ ಸೇರಿದಂತೆ ಅನೇಕ ಕಾರಣಗಳಿಂದ ವಿಳಂಬಗೊಂಡಿತ್ತು. ಈಗ ಸೇತುವೆ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಇನ್ನೂ ಬಿಟ್ಟುಕೊಟ್ಟಿಲ್ಲ ಯಾಕೆ ಎನ್ನುವ ಪ್ರಶ್ನೆ ಸ್ಥಳೀಯರದ್ದಾಗಿದೆ.
ಈ ಬಗ್ಗೆ ಗುತ್ತಿಗೆದಾರರನ್ನು ಸಂಪರ್ಕಿಸಿ ದಾಗ ಸೇತುವೆಯ ಮೇಲ್ಭಾಗದಲ್ಲಿ ಉದ್ದಕ್ಕೂ ವೇರಿಂಗ್ ಕೋಟ್ ನಡೆಯುತ್ತಿದೆ. ಜತೆಗೆ ಹಟ್ಟಿಕುದ್ರು ಕಡೆಯಲ್ಲಿ ಸೈಡ್ ವಾಲ್ ಮಾಡಲು ಬಾಕಿ ಇದೆ ಎಂದಿದ್ದು, ಅಂತೂ ಇಂತೂ ಮೇ ತಿಂಗಳ ಕೊನೆಯಲ್ಲಿ ಸೇತುವೆಯು ಸಂಚಾರಕ್ಕೆ ಮುಕ್ತವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮಳೆಗೆ ಮುನ್ನವಾದರೆ ಅನುಕೂಲ
ಮಳೆಗಾಲ ಆರಂಭವಾಗುವುದರೊಳಗೆ ಈ ಸೇತುವೆಯಲಿ ವಾಹನ ಸಂಚಾರ ಆರಂಭಗೊಂಡರೆ, ಹಟ್ಟಿಕುದ್ರು ಜನರ ಸುಮಾರು 70 ವರ್ಷಗಳ ಕನಸು ನನಸಾಗಲಿದೆ. ಈ ಸೇತುವೆ 14.59 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಸುದಿನ ವರದಿ
ಹಟ್ಟಿಕುದ್ರು ಸೇತುವೆ ಬೇಡಿಕೆ, ಕಾಮಗಾರಿ ವಿಳಂಬ, ಕಾಮಗಾರಿ ಆರಂಭದ ಕುರಿತಂತೆ ಉದಯವಾಣಿ ಸುದಿನವು ನಿರಂತರವಾಗಿ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.