ಹಟ್ಟಿ ಚಿನ್ನದ ಗಣಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು ಗ್ರಾಮ ಪಂಚಾಯ್ತಿ ಯಾಗಿದ್ದ ಹಟ್ಟಿ ಸಂಘ-ಸಂಸ್ಥೆಗಳ ಹಾಗೂ ಜನರ ಅವಿರತ ಹೋರಾಟದ ಫಲವಾಗಿ ಪಟ್ಟಣ ಪಂಚಾಯ್ತಿಯಾಗಿ ಬಡ್ತಿ ಪಡೆದಿದೆ.
ಗ್ರಾಮ ಪಂಚಾಯಿತಿಯಾಗಿದ್ದಾಗ 42 ಗ್ರಾಪಂ ಸದಸ್ಯರಿದ್ದರು. ಆದರೆ ಪಟ್ಟಣ ಪಂಚಾಯಿತಿಯಾದ ಬಳಿಕ ಸದಸ್ಯರ ಸಂಖ್ಯೆ 13 ಆಯಿತು. 13 ಸದಸ್ಯ ಬಲದ ಹಟ್ಟಿ ಪಟ್ಟಣ ಪಂಚಾಯ್ತಿಯಲ್ಲಿ 8 ಸ್ಥಾನಗಳಲ್ಲಿ ಕಾಂಗ್ರೆಸ್, 3 ರಲ್ಲಿ ಜೆಡಿಎಸ್, 2ರಲ್ಲಿ ಪಕ್ಷೇತರ ಸದಸ್ಯರು ಗೆದ್ದಿದ್ದಾರೆ. ವಿಶೇಷ ಎಂದರೆ ಪಟ್ಟಣ ಪಂಚಾಯ್ತಿ ವಾರ್ಡ್‌ಗಳ ಮೀಸಲಾತಿಯಲ್ಲಿ ಎಸ್‌ಟಿ ಮಹಿಳೆಗೆ ಪ್ರತ್ಯೇಕ ಮೀಸಲಾತಿ ಇರಲಿಲ್ಲ. ಆದರೆ ಒಂದು ವಾರ್ಡ್ ಮಾತ್ರ ಎಸ್‌ಟಿ ವರ್ಗಕ್ಕೆ ಮೀಸಲಿತ್ತು.
ಈಗ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿರುವುದು ವಿಶೇಷವಾಗಿದೆ. ಕೈಗಿಲ್ಲ ಅದೃಷ್ಟ: ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ನಲ್ಲಿ ಎಸ್‌ಟಿ ಮಹಿಳಾ ಸದಸ್ಯರಿಲ್ಲ. ಹೀಗಾಗಿ ಜೆಡಿಎಸ್‌ನಿಂದ ಗೆದ್ದಿರುವ ನಾಗರತ್ನ ಶರಣಗೌಡ ಗುರಿಕಾರ ಎಸ್‌ಟಿ ಸೇರಿದ ಏಕೈಕ ಸದಸ್ಯೆಯಾಗಿದ್ದಾರೆ. ಇವರು ಅಧ್ಯಕ್ಷರಾಗುವ ಹಾದಿ ಸುಗಮವಾಗಿದೆ. ಸ್ಪಷ್ಟ ಬಹುಮತ ಪಡೆದರೂ ಕಾಂಗ್ರೆಸ್ ಮೀಸಲಾತಿ ಪರಿಣಾಮ ಅಧಿಕಾರದಿಂದ ದೂರ ಇರುವಂತೆ ಮಾಡಿದೆ.
ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಸದಸ್ಯೆ ರೇಣುಕಾ ಗುಂಡಪ್ಪನವರ ಉಪಾಧ್ಯಕ್ಷರಾಗುವ ಸಂಭವವಿದೆ. ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಪಡೆದ ಜೆಡಿಎಸ್‌ಗೆ ಅಧಿಕಾರ ಚುಕ್ಕಾಣಿ ಹಿಡಿಯುವ ಅದೃಷ್ಟ ಲಭಿಸಿದೆ. ನಾಗರತ್ನ ಶರಣಗೌಡ ಗುರಿಕಾರ ಸ್ವಂತ ಬಲದ ಮೇಲೆ ಗೆದ್ದವರು. ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಗದ್ದುಗೆ ಅನಾಯಾಸವಾಗಿ ದೊರೆಯುವಂತೆ ಮಾಡಿದೆ.
ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವು ಮಹಿಳೆಯರಿಗೆ ಮೀಸಲಾಗಿದ್ದು ಮಹಿಳೆಯರೇ ಮೊದಲ ಅವಧಿ ಅಧಿಕಾರ ನಡೆಸಿದ ದಾಖಲೆಗೆ ಭಾಜನರಾಗಲಿದ್ದಾರೆ.