Advertisement

ಗರಿಗೆದರಿದೆ…ಹ್ಯಾಟ್ರಿಕ್‌ ಜತೆಗೆ ಸೆಮಿ ಕನಸು

09:39 AM Feb 28, 2020 | Team Udayavani |

ಮೆಲ್ಬರ್ನ್: ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಬಾಂಗ್ಲಾದೇಶವನ್ನು ಮಣಿಸಿ ಐಸಿಸಿ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಮೋಘ ಅಭಿಯಾನಗೈದಿರುವ ಭಾರತದ ಮುಂದೀಗ ಹ್ಯಾಟ್ರಿಕ್‌ ಜತೆಗೆ ಸೆಮಿಫೈನಲ್‌ ಕನಸು ಒಮ್ಮೆಲೇ ಗರಿಗೆದರಿ ನಿಂತಿದೆ. ಗುರುವಾರ ಇಲ್ಲಿನ “ಜಂಕ್ಷನ್‌ ಓವಲ್‌’ನಲ್ಲಿ ಪ್ರಬಲ ತಂಡಗಳಲ್ಲಿ ಒಂದಾದ ನ್ಯೂಜಿಲ್ಯಾಂಡನ್ನು ಹರ್ಮನ್‌ಪ್ರೀತ್‌ ಕೌರ್‌ ಪಡೆ ಎದುರಿಸಲಿದ್ದು, ಗೆದ್ದರೆ “ಎ’ ವಿಭಾಗದಿಂದ ಒಂದು ಸೆಮಿಫೈನಲ್‌ ಸ್ಥಾನವನ್ನು ಖಾತ್ರಿಗೊಳಿಸಲಿದೆ.

Advertisement

ಇನ್ನೊಂದೆಡೆ ಕಿವೀಸ್‌ ಮುಂದಿನ ಹಾದಿ ಕೂಡ ವಿಶಾಲವಾಗಿದೆ. ಅದು ಏಕೈಕ ಪಂದ್ಯದಲ್ಲಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಇನ್ನೂ 3 ಪಂದ್ಯಗಳು ಬಾಕಿ ಇರುವ ಕಾರಣ ಭಾರೀ ಒತ್ತಡದಲ್ಲೇನೂ ಇಲ್ಲ. ಭಾರತವನ್ನು ಮಣಿಸಿ ತಲೆಹೊರೆಯನ್ನು ಕಡಿಮೆ ಮಾಡಿಕೊಳ್ಳುವುದು ಸೋಫಿ ಡಿವೈನ್‌ ಪಡೆಯ ಯೋಜನೆ. ಅಕಸ್ಮಾತ್‌ ಸೋತರೆ ಆಗ ಉಳಿದೊಂದು ನಾಕೌಟ್‌ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಲಿದೆ.

ಮಂಧನಾ ಪುನರಾಗಮನ?
ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ ಭಾರತದ ಶಕ್ತಿ. 16ರ ಹರೆಯದ ಶಫಾಲಿ ವರ್ಮ, ಅನುಭವಿ ಆರಂಭಿಕ ಆಟ ಗಾರ್ತಿ ಸ್ಮತಿ ಮಂಧನಾ, ವನ್‌ಡೌನ್‌ನಲ್ಲಿ ಬರುವ ಜೆಮಿಮಾ ರೋಡ್ರಿಗಸ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕನ್ನಡತಿ ವೇದಾ ಕೃಷ್ಣಮೂರ್ತಿ, ಆಲ್‌ರೌಂಡರ್‌ ದೀಪ್ತಿ ಶರ್ಮ ಅವರ ನ್ನೊಳಗೊಂಡ ಬ್ಯಾಟಿಂಗ್‌ ಸರದಿ ಅತ್ಯಂತ ಬಲಿಷ್ಠ.

ಶಫಾಲಿ ಆಸೀಸ್‌ ವಿರುದ್ಧ 29 ರನ್‌, ಬಾಂಗ್ಲಾ ವಿರುದ್ಧ 17 ಎಸೆತಗಳಿಂದ 39 ರನ್‌ ಬಾರಿಸಿ ಸಿಡಿದು ನಿಂತಿದ್ದಾರೆ. ಜೆಮಿಮಾ ಕ್ರಮವಾಗಿ 26 ಮತ್ತು 34 ರನ್‌ ಹೊಡೆದಿದ್ದಾರೆ. ದೀಪ್ತಿ ಕಾಂಗರೂ ವಿರುದ್ಧ ಅಜೇಯ 49 ರನ್‌ ಹೊಡೆದು ಮಧ್ಯಮ ಸರದಿಗೆ ಶಕ್ತಿ ತುಂಬಿದ್ದಾರೆ. ವೇದಾ ಬಾಂಗ್ಲಾ ವಿರುದ್ಧ 11 ಎಸೆತಗಳಿಂದ ಅಜೇಯ 20 ರನ್‌ ಹೊಡೆದು ಫಾರ್ಮ್ ಕಂಡುಕೊಂಡಿರುವುದು ಉತ್ತಮ ಬೆಳವಣಿಗೆ. ಕೌರ್‌ ದೊಡ್ಡ ಇನ್ನಿಂಗ್ಸ್‌ ದಾಖಲಿಸಿದ್ದೇ ಆದರೆ ಭಾರತದ ಸ್ಕೋರ್‌ 150-160ರ ತನಕ ಸಾಗುವುದರಲ್ಲಿ ಅನುಮಾನವಿಲ್ಲ.

ಸ್ಮತಿ ಅನಾರೋಗ್ಯದಿಂದ ಬಾಂಗ್ಲಾ ವಿರುದ್ಧ ಆಡಿರಲಿಲ್ಲ. ಕಿವೀಸ್‌ ವಿರುದ್ಧ ಕಣಕ್ಕಿಳಿಯುವ ಸಂಭವವಿದೆ. ಆಗ ಅಗ್ರ ಕ್ರಮಾಂಕಕ್ಕೆ ಹೆಚ್ಚಿನ ಬಲ ಲಭಿಸಲಿದೆ.

Advertisement

ಭಾರತ-ಕಿವೀಸ್‌ ಇತಿಹಾಸ
ಸರಿಯಾಗಿ ಒಂದು ವರ್ಷದ ಹಿಂದೆ ಕಿವೀಸ್‌ ವಿರುದ್ಧ ಅವರದೇ ಅಂಗಳದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದ ಭಾರತ ವೈಟ್‌ವಾಶ್‌ ಸಂಕಟಕ್ಕೆ ಸಿಲುಕಿತ್ತು. ಆದರೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ 2018ರ ವಿಶ್ವಕಪ್‌ನಲ್ಲಿ ಭಾರತ 34 ರನ್ನುಗಳಿಂದ ನ್ಯೂಜಿಲ್ಯಾಂಡಿನ್ನು ಮಣಿಸಿದ್ದನ್ನು, ಕೌರ್‌ ಅಮೋಘ 103 ರನ್‌ ಬಾರಿಸಿದ್ದನ್ನು ಮರೆಯುವಂತಿಲ್ಲ.

ಭಾರತಕ್ಕೆ ಸ್ಪಿನ್‌ ಬಲ
ಭಾರತವನ್ನು ಮಣಿಸಬೇಕಾದರೆ ಸ್ಪಿನ್‌ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು ಎಂಬುದು ಈ ಕೂಟದಲ್ಲಿ ಈಗಾಗಲೇ ಸಾಬೀತಾಗಿರುವ ಸಂಗತಿ. ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ 2 ಪಂದ್ಯಗಳಿಂದ 7 ವಿಕೆಟ್‌ ಕಿತ್ತು ಘಾತಕವಾಗಿ ಪರಿಣಮಿಸಿದ್ದಾರೆ. ಜತೆಗೆ ರಾಜೇಶ್ವರಿ ಗಾಯಕ್ವಾಡ್‌, ದೀಪ್ತಿ ಶರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ವೇಗಿ ಶಿಖಾ ಪಾಂಡೆ 5 ವಿಕೆಟ್‌ ಉರುಳಿಸಿ ಅಪಾಯದ ಬಾವುಟ ಹಾರಿಸಿದ್ದಾರೆ.

ನ್ಯೂಜಿಲ್ಯಾಂಡ್‌ ತಂಡದಲ್ಲಿ ಬಹಳಷ್ಟು ಮಂದಿ “ಟಾಪ್‌ ಕ್ಲಾಸ್‌’ ಆಟಗಾರ್ತಿಯರಿದ್ದಾರೆ. ನಾಯಕಿ ಹಾಗೂ ಆಲ್‌ರೌಂಡರ್‌ ಸೋಫಿ ಡಿವೈನ್‌, ಅಗ್ರ ಕ್ರಮಾಂಕದ ಸುಝೀ ಬೇಟ್ಸ್‌, ಪೇಸರ್‌ ಲೀ ಟಹುಹು, ಲೆಗ್‌ ಸ್ಪಿನ್ನರ್‌ ಅಮೇಲಿಯಾ ಕೆರ್‌ ಬಗ್ಗೆ ಭಾರತ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.

ಭಾರತ:
ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ವೇದಾ ಕೃಷ್ಣಮೂರ್ತಿ, ತನಿಯಾ ಭಾಟಿಯ, ದೀಪ್ತಿ ಶರ್ಮ, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್‌, ಅರುಂಧತಿ ರೆಡ್ಡಿ,
ಪೂನಂ ಯಾದವ್‌.

ನ್ಯೂಜಿಲ್ಯಾಂಡ್‌:
ಸೋಫಿ ಡಿವೈನ್‌ (ನಾಯಕಿ), ರಶೆಲ್‌ ಪ್ರೀಸ್ಟ್‌, ಸುಝೀ ಬೇಟ್ಸ್‌, ಮ್ಯಾಡಿ ಗ್ರೀನ್‌, ಕ್ಯಾಟಿ ಮಾರ್ಟಿನ್‌, ಕ್ಯಾಟಿ ಪರ್ಕಿನ್ಸ್‌, ಅಮೇಲಿಯಾ ಕೆರ್‌, ಹ್ಯಾಲಿ ಜೆನ್ಸೆನ್‌, ಲೀಗ್‌ ಕಾಸ್ಪೆರೆಕ್‌, ಲೀ ಟಹುಹು, ಜೆಸ್‌ ಕೆರ್‌.

Advertisement

Udayavani is now on Telegram. Click here to join our channel and stay updated with the latest news.

Next