Advertisement

ಹ್ಯಾಟ್ರಿಕ್‌ ಜಯಕ್ಕೆ ಕಮಲ-ದಳ ಬ್ರೇಕ್‌?

05:37 PM Apr 07, 2018 | Team Udayavani |

ಕೂಡ್ಲಿಗಿ: ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕೂಡ್ಲಿಗಿ ಮೀಸಲು ಕ್ಷೇತ್ರ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಗಣಿಧಣಿ ಶಾಸಕರಾಗಿದ್ದರೂ, ಅಂಟಿಕೊಂಡಿರುವ ಹಿಂದುಳಿದ ಹಣೆಪಟ್ಟಿಯಿಂದ ಕ್ಷೇತ್ರ ಮುಕ್ತಗೊಂಡಿಲ್ಲ. ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಗಣಿ ಉದ್ಯಮಿ ಬಿ.ನಾಗೇಂದ್ರ ಶಾಸಕರಾಗಿ ಆಯ್ಕೆಯಾಗಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಕುಡಿವ ನೀರಿನ ಸಮಸ್ಯೆ ನೀಗಿಲ್ಲ. ಶುದ್ಧ ಕುಡಿವ ನೀರು ದೊರೆಯುತ್ತಿಲ್ಲ. ಈ ಮಧ್ಯೆ ಪುನಃ ವಿಧಾನಸಭೆ ಚುನಾವಣೆ ಬಂದಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿರುವ ಪಕ್ಷೇತರ ಶಾಸಕ ನಾಗೇಂದ್ರ, ಹ್ಯಾಟ್ರಿಕ್‌ ಗೆಲುವು ಸಾಧಿಸಲು ಸಜ್ಜಾಗುತ್ತಿದ್ದಾರೆ.

Advertisement

ಆದರೆ, ನಾಗೇಂದ್ರ ಅವರನ್ನು ಮಣಿಸಲು ರಣತಂತ್ರ ರೂಪಿಸುತ್ತಿರುವ ಸಂಸದ ಬಿ.ಶ್ರೀರಾಮುಲು, ಕೋಡಿಹಳ್ಳಿ ಭೀಮಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿ.ನಾಗೇಂದ್ರ ಈ ಬಾರಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದು ಇನ್ನೂ ಸ್ಪಷ್ಟವಾಗಬೇಕಿದೆ. ಇತ್ತ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸಿರುವ ಬಿ.ಶ್ರೀರಾಮುಲು, ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಪ್ಪರನ್ನು ಬಿಜೆಪಿಗೆ ಕರೆತಂದು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಮದುರ್ಗದ ಪಾಪಣ್ಣ ಕೂಡ ಬಿಜೆಪಿಯಿಂದ ಕಣಕ್ಕಿಳಿಯಲು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇದರ ಜೊತೆಗೆ ಮಾಜಿ ಸಂಸದೆ ಶಾಂತಾ ಅವರನ್ನು ಕಣಕ್ಕಿಳಿಸಲು ಕೂಡ ಲೆಕ್ಕಾಚಾರ ಹಾಕಲಾಗುತ್ತಿದೆ.

ಜೆಡಿಎಸ್‌ನಿಂದ ಕೂಡ್ಲಿಗಿಯ ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಅವರು ಈಗಾಗಲೇ ಜೆಡಿಎಸ್‌ ಅಭ್ಯರ್ಥಿಯಾಗಿದ್ದು
ಈಗಾಗಲೇ ಜೋರಾಗಿ ಚುನಾವಣಾ ಪ್ರಚಾರ ಕೈಗೊಂಡು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ಪೈಪೋಟಿ ಇತ್ತು. ಆದರೆ ಈ ಬಾರಿ ಕಾಂಗ್ರೆಸ್‌, ಜೆಡಿಎಎಸ್‌, ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜಿದ್ದಾಜಿದ್ದಿನ ರಾಜಕಾರಣಕ್ಕೆ ವೇದಿಕೆಯಾಗಲಿರುವ ಕೂಡ್ಲಿಗಿ ಕ್ಷೇತ್ರದ ಮತದಾರರು ನಾಗೇಂದ್ರರ ಹ್ಯಾಟ್ರಿಕ್‌ ಸಾಧನೆಗೆ ಸಹಕಾರ ನೀಡುವರೋ ಅಥವಾ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕುವರೋ ಎಂಬ ಕುತೂಹಲ ಮೂಡಿದೆ. ಕಳೆದ ಒಂದು ದಶಕದಿಂದ ಕೂಡ್ಲಿಗಿ ಶಾಸಕರಾಗಿರುವ ಬಿ.ನಾಗೇಂದ್ರ, ಮೊದಲ ಐದು ವರ್ಷದ ಅವಧಿಯಲ್ಲಿ ಪಟ್ಟಣದಲ್ಲಿ ದ್ವಿಪಥರಸ್ತೆ, ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ರಸ್ತೆ ಅಭಿವೃದ್ಧಿ ಕಾರ್ಯ ಹೊರತುಪಡಿಸಿದರೆ, ಇನ್ನುಳಿದಂತೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೂಡ್ಲಿಗಿಗೆ ತರುತ್ತೇನೆಂದು ಶಾಸಕ ಬಿ.ನಾಗೇಂದ್ರ ದಶಕದಿಂದ ಭರವಸೆ ನೀಡುತ್ತಿದ್ದಾರೆ ಹೊರತು, ಈವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಅಲ್ಲದೇ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳದಿರುವುದು ಕ್ಷೇತ್ರದ ಜನರಲ್ಲಿ ಅಸಮಾಧಾನ ಮೂಡಿಸಿದೆ. ಅಲ್ಲದೆ ನಾಗೇಂದ್ರ ವಲಸೆ ಬಂದವರಾಗಿದ್ದು, ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿದರೆ, ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬ ಅಭಿಪ್ರಾಯ ಮತದಾರರಲ್ಲಿ ಮೂಡಿದೆ.
 
ಕ್ಷೇತ್ರದ ಬೆಸ್ಟ್‌ ಏನು?
ಕೂಡ್ಲಿಗಿ ಪಟ್ಟಣದಲ್ಲಿ ಪ್ರಮುಖ ರಸ್ತೆಯನ್ನು ಅಗಲೀಕರಣಗೊಳಿಸಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಿದ್ದು, ಗ್ರಾಮೀಣ ಭಾಗದ ಹಲವು ಹಳ್ಳಿಗಳಲ್ಲೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರದ 216 ಹಳ್ಳಿಗಳಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ಪ್ರಗತಿಯಲ್ಲಿದೆ. 

ಕ್ಷೇತ್ರದ ದೊಡ್ಡ  ಸಮಸ್ಯೆ?
ಹಿಂದುಳಿದ ತಾಲೂಕು ಹಣೆಪಟ್ಟಿ ಹೊತ್ತಿರುವ ಕೂಡ್ಲಿಗಿ ಫ್ಲೋರೈಡ್‌ ಸಮಸ್ಯೆಯಿಂದ ಬಳಲುತ್ತಿದೆ. ಪ್ರತಿ ಗ್ರಾಮಕ್ಕೆ ಶುದ್ಧ ಕುಡಿವ ನೀರು ಒದಗಿಸುವ ಸಲುವಾಗಿ ಆರಂಭಿಸಲಾಗಿದ್ದ ಕಾಮಗಾರಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಸದ್ಯ ಒಂದಷ್ಟು ಚಾಲನೆ ಪಡೆದುಕೊಂಡಿದೆ. ಅಲ್ಲದೇ ಭದ್ರಾ ಮೇಲ್ದಂಡೆ ಯೋಜನೆಯಿಂದ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಇದು ಆದಲ್ಲಿ ನೂರಾರು ಎಕರೆ ಜಮೀನು ನೀರಾವರಿಯಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ಇನ್ನು ಮಿನಿ ವಿಧಾನಸೌಧ ನಿರ್ಮಾಣ, ಕೃಷಿ ಮಾರುಕಟ್ಟೆ ಅಭಿವೃದ್ಧಿ, ಕನಸಾಗಿಯೇ ಉಳಿದಿವೆ.

ಶಾಸಕರು ಏನಂತಾರೆ?
ಮೊದಲ ಐದು ವರ್ಷಗಳ ಅವಧಿಯಲ್ಲಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ರಸ್ತೆ, ಇತರೆ ಮೂಲ ಸೌಲಭ್ಯ ಕಲ್ಪಿಸಿದ್ದೇನೆ. ಐದು ವರ್ಷಗಳ ಅವಧಿಯಲ್ಲಿ 2 ವರ್ಷಗಳ ಕಾಲ ನನ್ನ ವೈಯಕ್ತಿಕ, ವ್ಯವಹಾರ ಮುಂತಾದ ವಿಚಾರಗಳಿಂದ ಕ್ಷೇತ್ರದ ಕಡೆ ನಿಗಾವಹಿಸಲು ಆಗಲಿಲ್ಲ. ಹೀಗಾಗಿ ನಾನು ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂದು ಅರ್ಥವಲ್ಲ, ಕೂಡ್ಲಿಗಿಯಂಥ ಹಿಂದುಳಿದ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆದಿವೆ. ತಾಲೂಕಿನ 216 ಹಳ್ಳಿಗಳಿಗೆ ಶಾಶ್ವತ ಕುಡಿವ ನೀರಿನ ಯೋಜನೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ.
ಬಿ. ನಾಗೇಂದ್ರ

Advertisement

ಕ್ಷೇತ್ರ ಮಹಿಮೆ
ಕೂಡ್ಲಿಗಿ ಕ್ಷೇತ್ರದಲ್ಲಿ ಗುಡೇಕೋಟೆ, ಜರ್ಮಲಿ ಪಾಳೇಗಾರರ ಆಡಳಿತದಲ್ಲಿತ್ತು. ಜರ್ಮಲಿಯಿಂದ ಉಜ್ಜಯಿನಿ ಮರುಳಸಿದೇಶ್ವರ ದೇವಸ್ಥಾನಕ್ಕೆ ಎಣ್ಣೆ ಕೊಂಡೊಯ್ದು, ಗೋಪುರಕ್ಕೆ ಮಜ್ಜನ ಮಾಡಲಾಗುತ್ತದೆ. ಗುಡೇಕೋಟೆ ಬಳಿ ಕರಡಿಧಾಮವಿದೆ. ಪಟ್ಟಣದಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕವಿದೆ. ಇಡೀ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದೆ. ಶೇಂಗಾ, ಜೋಳ, ಮೆಕ್ಕೆಜೋಳ ಕ್ಷೇತ್ರದ ಮುಖ್ಯ ಬೆಳೆಯಾಗಿದೆ. ಕ್ಷೇತ್ರ ರಂಗಭೂಮಿ ಕಲಾವಿದರ ತವರೂರಾಗಿದ್ದು, ಹಲವರು ರಾಜ್ಯ ಪ್ರಶಸ್ತಿ ಪುರಸ್ಕೃತರಿದ್ದಾರೆ. 

ಕಳೆದ ಐದು ವರ್ಷಗಳಲ್ಲಿ ಒಳ್ಳೆಯ ಆಡಳಿತ ನೀಡಿದ್ದರು. ಆದರೆ ಇನ್ನುಳಿದ 5 ವರ್ಷದಲ್ಲಿ ಪಕ್ಷೇತರ ಅಭ್ಯರ್ಥಿಯಾದಾಗ ಅಭಿವೃದ್ಧಿಗಳು ಶೂನ್ಯವಾಗಿವೆ. ತಾಲೂಕಿನಲ್ಲಿ ಬರೀ ಸುಳ್ಳು ಭರವಸೆ ನೀಡುತ್ತಿದ್ದಾರೆ. 
ರಿಯಾಜ್‌ ಪಾಷಾ’

ಅತೀ ಹಿಂದುಳಿದ ತಾಲೂಕುಗಳಲ್ಲಿ ಕೂಡ್ಲಿಗಿ ಒಂದು. ವಲಸೆ ಬಂದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡಿ, ಹಣದ ಆಮಿಷ ತೋರಿಸಿ ಮತ ಪಡೆಯುತ್ತಿದ್ದಾರೆ. ಆದರೆ, ಎಳ್ಳಷ್ಟೂ ಅಭಿವೃದ್ಧಿ ಕಾಣುತ್ತಿಲ್ಲ.
 ಗುನ್ನಳ್ಳಿ ರಾಘವೇಂದ್ರ. 

ಕೂಡ್ಲಿಗಿ ತಾಲೂಕು ಹುಣಿಸೆಹಣ್ಣಿನ ಕಣಜ. ರೈತರು ಹುಣಿಸೆಹಣ್ಣಿನ ಮಾರುಕಟ್ಟೆ ಹಾಗೂ ಕೋಲ್ಡ್‌ ಸ್ಟೋರೇಜ್‌ ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಇನ್ನೂ ರೈತರು ಬೆಳೆದ ಬೆಳೆ ಬೇರೆ ಕಡೆ ಸಾಗಿಸುವುದು ಅನಿವಾರ್ಯವಾಗಿದೆ.
ಜಿ.ಶ್ರೀಧರ

ಕಳೆದ ಒಂದು ದಶಕದಿಂದ ವಲಸೆ ಬಂದ ಅಭ್ಯರ್ಥಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ಅಭಿವೃದ್ಧಿ ಶೂನ್ಯ. ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಅವಕಾಶ ಕೊಟ್ಟರೆ, ಕ್ಷೇತ್ರದ ಅಭಿವೃದ್ಧಿ ಒಂದಷ್ಟು ನಿರೀಕ್ಷಿಸಬಹುದು. 
ಮಂಜುನಾಥ್‌. 

ಕೆ. ನಾಗರಾಜ

Advertisement

Udayavani is now on Telegram. Click here to join our channel and stay updated with the latest news.

Next