Advertisement

ಸಮಾವೇಶಗಳ ಆಯೋಜನೆ: ರಾಷ್ಟ್ರೀಯ ಮಾರ್ಗಸೂಚಿ ಅಗತ್ಯ

11:00 PM Jul 03, 2024 | Team Udayavani |

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಮಂಗಳವಾರ ಸಂಜೆ ಸತ್ಸಂಗ ಕಾರ್ಯಕ್ರಮವೊಂದರಲ್ಲಿ ವಿಪರೀತ ಜನದಟ್ಟಣೆ ಉಂಟಾಗಿ ಸಂಭವಿಸಿದ ಕಾಲ್ತುಳಿತ ದುರ್ಘ‌ಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಮಾನವಕೃತ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಕಾಲು¤ಳಿತ ಘಟನೆ ನಡೆದಾಗಲೆಲ್ಲ ಇಂತಹ ದುರ್ಘ‌ಟನೆಗಳನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆಯೇ ವಿನಾ ಈ ದುರ್ಘ‌ಟನೆಗಳಿಗೆ ಕಡಿವಾಣ ಹಾಕುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ವಿಫ‌ಲವಾಗಿದೆ.

Advertisement

ಹಾಥರಸ್‌ ದುರಂತ ಮತ್ತೂಮ್ಮೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷ, ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರು ಅಥವಾ ಆಯೋಜಕರು ಕನಿಷ್ಠ ಮಾರ್ಗಸೂಚಿಯನ್ನೂ ಪಾಲಿಸದಿರುವುದು, ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ, ಅಗತ್ಯ ಮುಂಜಾಗ್ರತೆ ಮತ್ತು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು ಹಾಗೂ ಜನರ ಅವಿವೇಕಿ ವರ್ತನೆಗಳಿಗೆ ಮತ್ತೂಮ್ಮೆ ಕನ್ನಡಿ ಹಿಡಿದಿದೆ. ದುರ್ಘ‌ಟನೆಗೆ ಕಾರಣವಾದ ಸತ್ಸಂಗ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಸ್ವಯಂಘೋಷಿತ “ಭೋಲೇ ಬಾಬಾ’ ನಾರಾಯಣ್‌ ಸಾಕರ್‌ ಹರಿಯ ಜೀವನ ವೃತ್ತಾಂತವೇ ಮೇಲ್ನೋಟಕ್ಕೆ ಅನುಮಾನಾನಾಸ್ಪದವಾಗಿ ಕಂಡುಬರುತ್ತಿದೆ. ಈತನ ಸತ್ಸಂಗ ಕಾರ್ಯಕ್ರಮಗಳು ಈ ಹಿಂದೆಯೂ ವಿವಾದಕ್ಕೀಡಾಗಿದ್ದವು. ಆದರೆ ಈ ಬಾರಿ ಈ ಸತ್ಸಂಗ ಕಾರ್ಯಕ್ರಮ ನೂರಾರು ಮಂದಿಯ ಪ್ರಾಣಕ್ಕೇ ಸಂಚಕಾರ ತಂದಿದೆ.

ಸ್ಥಳೀಯಾಡಳಿತ 80 ಸಾವಿರ ಮಂದಿಯನ್ನು ಸೇರಿಸಲಷ್ಟೇ ಅನುಮತಿ ನೀಡಿದ್ದರೆ ಸತ್ಸಂಗ ಕಾರ್ಯಕ್ರಮದಲ್ಲಿ 2.5ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯಲ್ಲಿ ಜನರು ಜಮಾವಣೆಯಾಗಲು ಸ್ಥಳೀಯಾಡಳಿತ ಮತ್ತು ಪೊಲೀಸ್‌ ಇಲಾಖೆ ಅನುಮತಿ ನೀಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಒಂದು ವೇಳೆ ಸಂಘಟಕರು ಮತ್ತು ಪೊಲೀಸರ ನಿರೀಕ್ಷೆಗೂ ಮೀರಿ ಜನರು ಸೇರತೊಡಗಿದಾಗ ಜನರನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳುವ ಮತ್ತು ಜನರನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಕೂಡ ಒಟ್ಟಾರೆ ಕಾರ್ಯಕ್ರಮ ಆಯೋಜನೆಯಲ್ಲಿಯೇ ಎಡವಟ್ಟಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ದುರ್ಘ‌ಟನೆಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ, ತನಿಖೆ, ಕಾನೂನು ಪ್ರಕ್ರಿಯೆ ಗಳೆಲ್ಲವೂ ನಡೆಯುತ್ತಿವೆ. ಈ ವಿಷಯವಾಗಿ ರಾಜಕೀಯ ಕೆಸರೆರಚಾಟವೂ ಆರಂಭಗೊಂಡಿದೆ. ಅದರೆ ವಾರ, ತಿಂಗಳು ಕಳೆದ ಬಳಿಕ ಇವೆಲ್ಲವೂ ಜನಮಾನಸದಿಂದ ಮರೆಯಾಗಿ ಯಥಾಪ್ರಕಾರ ಇನ್ನೊಂದು ಇಂತಹ ದುರಂತ ನಡೆದಾಗಲೇ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಈ ಸಂಪ್ರದಾಯದಿಂದ ಸರಕಾರ ಮತ್ತು ಸಮಾಜ ಇನ್ನಾದರೂ ಹೊರಬರಬೇಕು.

ಭವಿಷ್ಯದಲ್ಲಿ ಕಾಲ್ತುಳಿತದಂತಹ ದುರ್ಘ‌ಟನೆಗಳು ನಡೆಯದಂತಾಗಲು ಕೇಂದ್ರ ಸರಕಾರ ಒಂದು ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವ ಅಗತ್ಯವಿದೆ. ಇಂತಹ ದುರಂತಗಳು ಅಮಾಯಕರ ಪ್ರಾಣಹಾನಿಯ ಜತೆಯಲ್ಲಿ ದೇಶಕ್ಕೂ ಕಳಂಕ ತರುತ್ತವೆ. ಧಾರ್ಮಿಕ ಸಹಿತ ಯಾವುದೇ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದಾದರೆ ಅದಕ್ಕೊಂದು ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿ ಎಲ್ಲ ರಾಜ್ಯಗಳೂ ಅದನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಬೇಕು. ಸೂಕ್ತ ಮುಂಜಾಗ್ರತ ಕ್ರಮಗಳ ಜತೆಯಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕು. ಇನ್ನು ಜನರು ಕೂಡ ಯಾವುದೋ ಒಂದು ಭಾವನಾತ್ಮಕ ಅಥವಾ ಧಾರ್ಮಿಕ ಗುಂಗಿನಲ್ಲಿ ತಮ್ಮ ಪ್ರಾಣಕ್ಕೇ ಎರವಾಗಬಲ್ಲಂತಹ ಇಂತಹ ಜನನಿಬಿಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸರಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವುದರ ಜತೆಯಲ್ಲಿ ಜನತೆ ಕೂಡ ಒಂದಿಷ್ಟು ವಿವೇಚನಾಶೀಲರಾಗಿ ವರ್ತಿಸಿದಲ್ಲಿ ಇಂತಹ ದುರ್ಘ‌ಟನೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next