ಲಕ್ನೋ:ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇವರಿಗೆ ಪಿಎಫ್ ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆ ಜತೆ ನಂಟು ಹೊಂದಿರುವ ಬಗ್ಗೆ ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಿಂದ ಹತ್ರಾಸ್ ಗೆ ತೆರಳುತ್ತಿದ್ದ ನಾಲ್ವರು ಪಿಎಫ್ ಐ ವ್ಯಕ್ತಿಗಳನ್ನು ಮಥುರಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಟೋಲ್ ಪ್ಲಾಜಾ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ನಾಲ್ವರು ಸೆರೆಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ. ದೆಹಲಿಯಂದ ಹತ್ರಾಸ್ ಗೆ ಕೆಲವು ಶಂಕಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದರು ಎಂದು ವರದಿ ವಿವರಿಸಿದೆ.
ಬಂಧಿತರನ್ನು ಮುಝಾಫರ್ ನಗರದ ಅತಿಖ್ ಉರ್ ರೆಹಮಾನ್, ಮಲಪ್ಪುರಂನ ಸಿದ್ದಿಖಿ, ಬಹರೈಚ್ ನ ಮಸೂದ್ ಅಹ್ಮದ್ ಮತ್ತು ರಾಮ್ ಪುರ್ ನ ಅಲಾಂ ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿಗಳ ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್ ಹಾಗೂ ಕೆಲವು ಸಾಹಿತ್ಯದ ಪುಸ್ತಕಗಳು ಲಭ್ಯವಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಗೆ ಪೆಟ್ರಾ ಕ್ವಿಟೋವಾ, ಎಲಿನಾ ಸ್ವಿಟೋಲಿನಾ
ಉತ್ತರ ಪ್ರದೇಶ ಪೊಲೀಸರ ಪ್ರಕಾರ, ನಾಲ್ವರು ಆರೋಪಿಗಳಿಗೂ ಪಿಎಫ್ ಐ ಜತೆ ನಂಟಿದ್ದು, ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪ್ರತಿಭಟನೆ ಹಿಂಸಾಚಾರದಲ್ಲಿ ಪಿಎಫ್ ಐ ಶಾಮೀಲಾಗಿದ್ದರಿಂದ ಸಂಘಟನೆಯನ್ನು ನಿಷೇಧಿಸಬೇಕೆಂದು ಉತ್ತರ ಪ್ರದೇಶ ಪೊಲೀಸರು ಒತ್ತಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.