ಎಪ್ಪತ್ತರ ದಶಕದಲ್ಲಿ ತೆರೆ ಕಂಡಿದ್ದ “ಹಾಥಿ ಮೇರೆ ಸಾಥಿ’ ಚಿತ್ರವು ತನ್ನದೇಯಾದ ಅಲೆ ಸೃಷ್ಟಿಸಿತ್ತು. ಚಿತ್ರದ ನಾಯಕ ರಾಜೇಶ್ ಖನ್ನಾ ನಟನೆ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ಈ ಚಿತ್ರ ತೆರೆ ಮೇಲೆ ಬರಲಿದೆ. ಆದರೆ ಈ ಬಾರಿ “ಹಾಥಿ’ಗೆ ರಾಣಾ “ಸಾಥಿ’ಯಾಗಲಿದ್ದಾರೆ.
ಬಾಹುಬಲಿಯ “ಬಲ್ಲಾಳ’ನ ಮೂಲಕ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದ ರಾಣಾ ದಗ್ಗುಬಾಟಿ, ತಮ್ಮ ಮುಂದಿನ ಚಿತ್ರ “ಹಾಥಿ ಮೇರೆ ಸಾಥಿ’ ಚಿತ್ರದ ಫಸ್ಟ್ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಣ ಬನ್ ದೇವ್ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರ 1971 ರಲ್ಲಿ ರಾಜೇಶ್ ಖನ್ನಾ ನಟಿಸಿದ್ದ ಹಾಥಿ ಮೇರೆ ಸಾಥಿ ಚಿತ್ರದ ರೀಮೇಕ್ ಆಗಿದೆ. ಇನ್ನು ಫಸ್ಟ್ ಪೋಸ್ಟರ್ ನಲ್ಲಿ ರಾಣಾ ಆನೆಯ ಸೊಂಡಿಲಿಗೆ ಒರಗಿ ನಿಂತಿರುವ ಫೋಸ್ ನಲ್ಲಿ ಮಿಂಚಿದ್ದಾರೆ.
ಹೊಸ ವರ್ಷಕ್ಕೆ ಅತ್ಯುತ್ತಮ ಕಥೆಯ ಮೂಲಕ ಮನರಂಜನೆ ದೊರೆಯಲಿದೆ, ಹಾಥಿ ಮೇರೆ ಸಾಥಿಯಿಂದ ಬನ್ ದೇವ್ ನನ್ನು ಪರಿಚಯಿಸುತ್ತಿದ್ದೇನೆ ಎಂದು ರಾಣಾ ಟ್ವೀಟಿಸಿದ್ದಾರೆ. ರಾಣಾ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ “ಹಾಥಿ ಮೇರೆ ಸಾಥಿ’ ಚಿತ್ರ ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ತೆರೆ ಕಾಣಲಿದೆ.