“ತಮಿಳುನಾಡಿನಿಂದ ಬಂದವರು ಬೆಂಗಳೂರಲ್ಲಿ ಬಾಂಬ್ ಇಡುತ್ತಾರೆ’ ಎಂದು ಹೇಳಿಕೆ ನೀಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣ ಆಯೋಗವು, ರಾಜ್ಯ ಮುಖ್ಯ ಚುನಾವಣಧಿಕಾರಿಗೆ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಆಯೋಗವು ಕ್ರಮುಕ್ಕೆ ಮುಂದಾಗಿರುವುದು ಸಮಂಜಸವಾಗಿದೆ. ಚುನಾವಣೆ ಎಂದ ಮೇಲೆ “ಪ್ರಚಾರ’ ಇರಲೇಬೇಕು. ಆದರೆ ಅದು “ಅಪಪ್ರಚಾರ’ವಾಗಬಾರದು.
ಸ್ವತಂತ್ರ ಭಾರತದ ಈ 75 ವರ್ಷಗಳಲ್ಲಿ ಈಗ ನಡೆಯುತ್ತಿರುವುದು 18ನೇ ಲೋಕಸಭೆ ಚುನಾವಣೆ. ಇಲ್ಲಿವರೆಗಿನ ಎಲ್ಲ ಚುನಾವಣೆಗಳು ಪ್ರಚಂಡ ಪ್ರಚಾರ ವೈಖರಿಗಳನ್ನು ಕಂಡಿವೆ. ಚುನಾವಣೆ ಎಂದ ಮೇಲೆ ವಾಕ್ಸಮರ, ಟೀಕೆ- ಟಿಪ್ಪಣೆಗಳು, ಮೊನಚಾದ ಮಾತು, ವ್ಯಂಗ್ಯ ನುಡಿಗಳು ಸಹಜ. ಚುನಾವಣೆಗೆ ಪ್ರಚಾರವೇ ಜೀವಾಳ. ದಿಗ್ಗಜ ನಾಯಕರ ವಾಗ್ಯುದ್ಧಗಳನ್ನು ಈ ದೇಶದ ಮತದಾರರು ಕಂಡಿದ್ದಾರೆ. ಜವಾಹರಲಾಲ್ ನೆಹರೂ, ರಾಮ ಮನೋಹರ ಲೋಹಿಯಾರಿಂದ ಹಿಡಿದು ಅಟಲ್ ಬಿಹಾರ ವಾಜಪೇಯಿವರೆಗೆ ಅದ್ಭುತ ಚುನಾವಣ ಪ್ರಚಾರಕರು ನಮ್ಮನ್ನು ಪ್ರಭಾವಿಸಿದ್ದಾರೆ. ವಾಜಪೇಯಿ ಅವರ ಚುನಾವಣ ಭಾಷಣ ಕೇಳುವುದಕ್ಕಾಗಿಯೇ ಲಕ್ಷಾಂತರ ಜನರು ಸೇರುತ್ತಿದ್ದರು! ಮೇರು ನಾಯಕರ ಮಾತುಗಳಲ್ಲಿ ಮೊನಚು ಇರುತ್ತಿತ್ತೇ ಹೊರತು, ನಂಜಿರುತ್ತಿರಲಿಲ್ಲ.
ಇತ್ತೀಚಿನ ಚುನಾವಣೆಗಳಲ್ಲಿ ಪ್ರಚಾರ ಎಂದರೆ “ದ್ವೇಷ ಭಾಷಣ’ಗಳು ಎಂಬಂತಾಗಿವೆ. ವೈಯಕ್ತಿಕ ನಿಂದನೆ, ತೇಜೋವಧೆ, ಭಾಷೆಯಾಧಾರಿತ ಮತ್ತು ಸಮುದಾಯಗಳ ವಿರುದ್ಧ ನಿಂದನೆಗಳು ಹೆಚ್ಚುತ್ತಲೇ ಇವೆ. ಇತ್ತೀಚಿಗೆ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡುವ ಭರದಲ್ಲಿ “ಪನೌತಿ’ (ಅಪಶಕುನ) ಎಂಬ ಹೇಳಿಕೆ ನೀಡಿ ಚುನಾವಣ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿದ್ದರು. 2019ರಲ್ಲಿ ಮೋದಿಯನ್ನು ಟೀಕಿಸಲು ಹೋಗಿ ಲೋಕಸಭಾ ಸದಸ್ಯತ್ವಕ್ಕೇ ಕುತ್ತು ತಂದುಕೊಂಡಿದ್ದರು. ರಾಹುಲ್ ಎಂದೇನಲ್ಲ, ಅನೇಕ ರಾಜಕಾರಣಿಗಳು ಹದ್ದು ಮೀರಿ ಮಾತನಾಡಿದ್ದಿದೆ. ಇದೀಗ ಶೋಭಾ ಕರಂದ್ಲಾಜೆ ಸರದಿ.
ಈ ದ್ವೇಷ ಭಾಷಣ ಎಂಬುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಧ್ರುವೀಕರಣ ಮಾಡುವ ಮೂಲಕ ಮತಗಳನ್ನು ಸೆಳೆಯಲು ದ್ವೇಷ ಭಾಷಣಕ್ಕೆ ರಾಜ ಕೀಯ ನಾಯಕರು ಜೋತು ಬೀಳುತ್ತಿರುವುದು ಕಟುವಾಸ್ತವ. ಆ ಕಾರಣ ಕ್ಕಾಗಿಯೇ ಪ್ರಸಕ್ತ ಚುನಾವಣೆಯಲ್ಲಿ ದ್ವೇಷ ಭಾಷಣ ಕಡಿವಾಣ ಹಾಕಲು ಕೇಂದ್ರ ಚುನಾವಣ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಖಡಕ್ಕಾದ ಎಚ್ಚರಿಕೆ ನೀಡಿತ್ತು. ಇಷ್ಟಾಗಿಯೂ ರಾಜಕಾರಣಿಗಳು ಎಚ್ಚೆತ್ತುಕೊಳ್ಳುದಿರುವುದು ನಮ್ಮ ಚುನಾ ವಣ ಪ್ರಚಾರದ ಕೀಳು ಮಟ್ಟವನ್ನು ಅದು ತೋರಿಸುತ್ತದೆ. ಇದು ಹೀಗೆಯೇ ಮುಂದುವರಿದರೆ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಳಂಕ ತಟ್ಟದೇ ಇರದು.
ದ್ವೇಷ ಭಾಷಣಗಳಿಗೆ ಕಡಿವಾಣಕ್ಕೆ ಕಾನೂನು ಮೂಲಕ ಕ್ರಮ ಕೈಗೊಳ್ಳುವುದು ಒಂದು ಪರಿಹಾರ ಮಾರ್ಗವಾದರೆ, ಮತ್ತೂಂದು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು. ಚುನಾವಣ ಪ್ರಚಾರ ಮಾತ್ರವಲ್ಲ, ಸಾರ್ವಜನಿಕ ಜೀವನ ದಲ್ಲಿರುವವರು ಎಲ್ಲ ಸಮಯದಲ್ಲೂ ಮಾತಿನ ಮೇಲೆ ಹಿಡಿತ ಹೊಂದುವುದು ಅಗತ್ಯ. ಅವರ ಮಾತುಗಳು ಸಭ್ಯತೆಯನ್ನು ಮೀರಬಾರದು. “ನುಡಿದರೆ ಲಿಂಗ ಮೆಚ್ಚಿ ಅಹುದನೆಬೇಕು’ ಎಂಬ ಬಸವಣ್ಣನವರ ಮಾತನ್ನು ಪಾಲಿಸಿದರೆ, ಬಹುಶಃ ದ್ವೇಷಾಸೂಯೆಗಳಿಗೆ ಪ್ರಚಾರದಲ್ಲಿ ಜಾಗವೇ ಇರುವುದಿಲ್ಲ