Advertisement

ಭಾಷೆಯ ಹೆಸರಿನಲ್ಲಿ ದ್ವೇಷ ಸೃಷ್ಟಿಯಾಗಬಾರದು

10:02 AM Nov 02, 2017 | Team Udayavani |

ಪುರಭವನ: ಕನ್ನಡ ಭಾಷಾ ಪ್ರೀತಿಯನ್ನು ನಾವು ಬೆಳೆಸಬೇಕಿದೆ. ಆದರೆ, ಇದನ್ನೇ ನೆಪವಾಗಿರಿಸಿ ಇತರ ಭಾಷಿಕ ಮನುಸ್ಸುಗಳನ್ನು ವಿರೋಧಿಸುವ ಮನಸ್ಥಿತಿ ಆಗಬಾರದು. ಹೀಗಾಗಿ ಭಾಷೆಯ ಹೆಸರಿನಲ್ಲಿ ದ್ವೇಷ ಸೃಷ್ಟಿಯಾಗಲೇಬಾರದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎಂ. ಹೆಗ್ಡೆ ಹೇಳಿದರು.

Advertisement

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಕೇವಲ ಸಂಕೇತ ಮಾತ್ರ. ಒಬ್ಬರನ್ನೊಬ್ಬರು ಪ್ರೀತಿಸಿ ಬದುಕು ನಡೆಸಬೇಕು. ಈ ವೇಳೆ ಭಾಷೆಯ ಹೆಸರಿನಲ್ಲಿ ಮಾನವ ತತ್ವಕ್ಕೆ ಧಕ್ಕೆ ಆಗಕೂಡದು. ಈಗಾಗಲೇ ಇಂತಹ ಪರಿಪಾಠ ನಮ್ಮಲ್ಲಿ ಆರಂಭವಾಗಿದೆ ಎಂದು ಹೇಳಿದರು.

ರಾಜ್ಯ ರಾಜ್ಯಗಳ ಮಧ್ಯೆ ಭಾಷೆಯ ವಿಚಾರದಲ್ಲಿ ಹೊಡೆದಾಟ ಆಗುವ ಪರಿಸ್ಥಿತಿಗೆ ಬಂದಿದೆ. ಈಗ ಮತ್ತೆ ಇನ್ನಷ್ಟು ಅಪಾಯವೂ ಎದುರಾಗಿದ್ದು, ನಮ್ಮೊಳಗೆ ತುಳುನಾಡು ಬೇಕು ಎಂಬ ಕೂಗು ಕೂಡ ಎದುರಾಗಿದೆ. ಈ ಮೂಲಕ ನಮ್ಮ ರಾಜ್ಯದೊಳಗೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ದುರದೃಷ್ಟಕರ ಎಂದರು.

ಅಶಕ್ತರಿಗೆ ಬೆಳಕಾಗುವ ಕಾರ್ಯವನ್ನು ನಾವೆಲ್ಲ ಮಾಡುವ ಮುಖೇನ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ. ಸತ್ಯವಂತರಾಗಿ, ಲಂಚ ಕೊಡುವುದಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ ಬದುಕೋಣ ಎಂದರು. ಹೊರನಾಡು ಹಾಗೂ ಸ್ಥಳೀಯ ಬಾಲಪ್ರತಿಭೆಗಳಿಗೆ ‘ಸಾಧಕ ಪುರಸ್ಕಾರ’ ಪ್ರದಾನ ಮಾಡಿ ಗೌರವಿಸಲಾಯಿತು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ಪ್ರದೀಪ್‌ ಕುಮಾರ್‌ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ
ಜಾನಪದ ಪರಿಷತ್‌ನ ಸುರೇಶ್‌ ಶೆಟ್ಟಿ ಯೆಯ್ನಾಡಿ, ಪ್ರಮುಖರಾದ ಶ್ರೀನಿವಾಸ್‌ ಉಪಾಧ್ಯಾಯ, ಎಚ್‌.ಬಿ.ಎಲ್‌. ರಾವ್‌, ಶಿವರಾಮ್‌, ಜ್ಞಾನೇಶ್‌, ಚಂದ್ರಹಾಸ್‌ ರೈ, ಐತಪ್ಪ ನಾೖಕ್‌, ವಿಜಯಲಕ್ಷ್ಮೀ ಶೆಟ್ಟಿ, ಪೂರ್ಣಿಮಾ ಪೇಜಾವರ ಉಪಸ್ಥಿತರಿದ್ದರು. ಉಮೇಶ್‌ ಸ್ವಾಗತಿಸಿ, ಸುಧಾಕರ ರಾವ್‌ ಪೇಜಾವರ ಸಮ್ಮಾನಿತರ ವಿವರ ನೀಡಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಕವಿಗೋಷ್ಠಿ-ಸಾಂಸ್ಕೃತಿಕ ಸಂಭ್ರಮ
ಶಾಂತಾ ಕುಂಟಿನಿ, ಎಂ.ಪಿ.ಬಶೀರ್‌ ಅಹಮ್ಮದ್‌, ಗುಣಾಜೆ ರಾಮಚಂದ್ರ ಭಟ್‌ ಹಾಗೂ ನಾಗರಾಜ ಖಾರ್ವಿ ಅಳಿಕೆ ಅವರಿಂದ ಕವಿಗೋಷ್ಠಿ ನಡೆಯಿತು. ರೋಮನ್‌ ಮತ್ತು ಕ್ಯಾಥರೀನ್‌ ಲೋಬೋ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮಧುಸೂದನ ಕುಶೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ, ಮಂಚಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂತ್ರ ನಾಟ್ಯ ಕಲಾ ಗುರುಕುಲದ ವಿದ್ವಾನ್‌ ಶ್ರವಣ ಉಳ್ಳಾಲ್‌ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next