Advertisement
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೊಂದು ವಾರದ ಹಿಂದೆ ಮೈಸೂರಿನ ಕೆಲ ಕಾಂಗ್ರೆಸ್ ಮುಖಂಡರ ಮನೆ ಮೇಲೆ ನಡೆದ ಐಟಿ ದಾಳಿ ಸೇರಿದಂತೆ ನಾಗಮಂಗಲ ತಾಲೂಕು ಡಿವೈಎಸ್‌ಪಿ, ವೃತ್ತ ನಿರೀಕ್ಷಕರ ವರ್ಗಾವಣೆ, ತಮ್ಮ ಆಪ್ತ ಸಹಾಯಕ ಮತ್ತು ತನ್ನ ಸಂಬಂಧಿ ಶಿಕ್ಷಕರು, ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು ಚುನಾವಣಾ ಆಯೋಗಕ್ಕೆ ದೂರು ನೀಡುವ ಮಟ್ಟಕ್ಕೆ ಮಾಜಿ ಪ್ರಧಾನಿಯೊಬ್ಬರು ಇಳಿಯುತ್ತಾರೆಂದರೆ ಎಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆಂಬುದು ಜನರಿಗೆ ತಿಳಿಯುತ್ತದೆ ಎಂದು ಲೇವಡಿ ಮಾಡಿದರು.
ರಾಜ್ಯದ ಎಲ್ಲಾ ಕ್ಷೇತ್ರವನ್ನು ಬದಿಗಿಟ್ಟು ನಾಗಮಂಗಲ ಕ್ಷೇತ್ರವನ್ನೇ ಏಕೈಕ ಗುರಿಯಾಗಿಸಿಕೊಂಡಿರುವ ಜೆಡಿಎಸ್ ವರಿಷ್ಠರು, ವಿವಿಧ ಚುನಾವಣಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ, ಅವರ ತಂತ್ರಗಳಿಗೆ ಕ್ಷೇತ್ರದಲ್ಲಿ ಫಲ ಸಿಗುವುದಿಲ್ಲ. ಅಭಿವೃದ್ಧಿ ರಾಜಕಾರಣ ಬಿಟ್ಟು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಕುತಂತ್ರ ರಾಜಕಾರಣ:
ಕ್ಷೇತ್ರದಲ್ಲಿ ದಿನಕಳೆದಂತೆ ಕಾಂಗ್ರೆಸ್ ಪರ ಮತದಾರರು ಒಲವು ತೋರುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಜೆಡಿಎಸ್ ವರಿಷ್ಠರು, ಕುತಂತ್ರದ ರಾಜಕಾರಣ ಮಾಡಲು ಹೊರಟಿದ್ದಾರೆ. ತಾನು ಯಾರಿಗೂ ಅನ್ಯಾಯ ಮಾಡಿಲ್ಲ. ತನ್ನನ್ನು ಜೆಡಿಎಸ್ ವರಿಷ್ಠರು ಎಷ್ಟು ದ್ವೇಷಿಸುತ್ತಾರೋ, ಕ್ಷೇತ್ರದ ಜನರು ತನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಾರೆ. ಕಾರ್ಯಕರ್ತರು ರೊಚ್ಚಿಗೆದ್ದು ತನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೂ ದೇವೇಗೌಡರೂ ಸೇರಿ ಎಂತಹ ಪ್ರಭಾವಿಗಳೇ ಬಂದರೂ ಏನೇ ಕುತಂತ್ರ ಮಾಡಿದರೂ ಧೈರ್ಯದಿಂದ ಎದುರಿಸುತ್ತೇನೆಂದರು.
Related Articles
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಹಲವು ಬಾರಿ ಬಂದು ಹೋಗಿದ್ದಾರೆ. ಆದರೆ, ರಾಜ್ಯದ ಉಳಿದೆಲ್ಲಾ ಕ್ಷೇತ್ರ ಬಿಟ್ಟು ನಾಗಮಂಗಲವನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ ಎಂದರೆ ಅವರಿಗೆ ಸೋಲಿನ ಭೀತಿ ಎಷ್ಟಿದೆ ಎಂದು ತಿಳಿಯುತ್ತದೆ ಎಂದರು.
Advertisement
ತನ್ನ ಬಗ್ಗೆ ಎಷ್ಟು ಲಘುವಾಗಿ ಮಾತನಾಡಿ, ದ್ವೇಷಿಸುತ್ತಾರೆಯೋ ಅವೆಲ್ಲವೂ ಸಹ ದಿನಕಳೆದಂತೆ ನನಗೆ ಶಕ್ತಿಯಾಗಿ ಪರಿವರ್ತನೆಯಾಗುತ್ತವೆ. ಅವರು ಕೆಣಕಿದಷ್ಟು ಕ್ಷೇತ್ರದಲ್ಲಿ ನಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪುಟಿದೇಳುತ್ತಿದ್ದಾರೆ. ಹೀಗಾಗಿ ಇಂತಹ ರಾಜಕೀಯ ತಂತ್ರಗಳನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿ ಚುನಾವಣೆ ಎದುರಿಸಲಿ ಎಂದು ಹೇಳಿದರು.
ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಕೆಪಿಸಿಸಿ ಸದಸ್ಯ ಬಿದರಕೆರೆ ಮಂಜೇಗೌಡ, ತಾಪಂ ಸದಸ್ಯ ಗಿರೀಶ್, ಮಾಜಿ ಸದಸ್ಯ ಹೊನ್ನಾವರ ಶಂಕರ್, ರಾಜು, ಎನ್.ಟಿ.ಕೃಷ್ಣಮೂರ್ತಿ ಇದ್ದರು.