Advertisement

ದ್ವೇಷ, ಅಸೂಯೆ ನಿಯಂತ್ರಿಸಬೇಕಿದೆ; ರಾಹುಲ್‌ ಗಾಂಧಿ

05:34 PM Apr 01, 2022 | Team Udayavani |

ತುಮಕೂರು: ದೇಶದಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಬದುಕಬೇಕಿದೆ. ಸದ್ಯ ದ್ವೇಷ, ಅಸೂಯೆ ಭಾವನೆ ಹೆಚ್ಚಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ. ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ತಪೋನೆಲವಾದ ಸಿದ್ಧಗಂಗೆಯಲ್ಲಿ ಈ ಕಾರ್ಯ ಶತಮಾನಗಳಿಂದ ನಡೆದುಕೊಂಡು ಬಂದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

Advertisement

ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಗುರುವಂದನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರು, ಗದ್ದುಗೆ ದರ್ಶನ ಪಡೆದು ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಸ್ವಲ್ಪ ಸಮಯ ಧ್ಯಾನ ಮಾಡಿದರು. ನಂತರ ಮಠದ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಠಕ್ಕೂ ತಮ್ಮ ಕುಟುಂಬಕ್ಕೂ ಇರುವ ನಂಟನ್ನು ಮೆಲುಕು ಹಾಕಿ ಮಾತನಾಡಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದಾಗ ಶ್ರೀಮಠಕ್ಕೆ ಭೇಟಿ ನೀಡಿದ್ದೆ. ಎರಡನೇ ಭೇಟಿಯಲ್ಲಿ ಅವರ ಅಗಲಿಕೆಯ ದುಃಖ ಕಾಡುತ್ತಿದೆ. ಭವ್ಯ ಭಾರತದ ಬಗ್ಗೆ ದೂರದೃಷ್ಟಿ ಹೊಂದಿದ್ದ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ಮೂಲಕ ಭವಿಷ್ಯ ರೂಪಿಸಿಕೊಟ್ಟಿದ್ದಾರೆ. ಬಸವಣ್ಣನವರ ಆಶಯದಂತೆ ಎಲ್ಲರೂ ಒಟ್ಟಾಗಿ ಬಾಳಬೇಕು ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ಧ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಾವೆಲ್ಲರೂ ಮಾನವೀಯತೆಯ ಹಾದಿಯಲ್ಲಿ ದ್ವೇಷ, ಅಸೂಯೆ ತೊರೆದು ಬಾಳಬೇಕಿದೆ ಎಂದು ನುಡಿದರು. ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರತಿಭಾ ವಂತರು, ಗುಣಸಂಪನ್ನರ ನಾಯಕತ್ವ ಅತ್ಯವಶ್ಯಕ. ರಾಹುಲ್‌ಗಾಂಧಿ ಅವರು ಇಂತಹ ಗುಣಸಂಪನ್ನರಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖರೆನಿಸಿರುವ ಅವರಿಗೆ ದೇವರು ನಾಡನ್ನು ಮುನ್ನಡೆಸುವ ಸ್ಫೂರ್ತಿ, ಶಕ್ತಿ ನೀಡಲೆಂದು ಹಾರೈಸಿದರು.

ಸಮಾರಂಭದಲ್ಲಿ ರಾಹುಲ್‌ಗಾಂಧಿ ಭಾಷಣವನ್ನು ವಿಧಾನಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಕನ್ನಡಕ್ಕೆ ಅನುವಾದಿಸಿದರು. ಮಠದ ಮಕ್ಕಳ ಸಾಮೂಹಿಕ ಪ್ರಾರ್ಥನೆ,  ಬಸವಣ್ಣನವರ ವಚನಕ್ಕೆ ತಲೆದೂಗಿದ ರಾಹುಲ್‌ ಗಾಂಧಿ ಮಕ್ಕಳೊಡನೆ ಗ್ರೂಪ್‌ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಗಮನಸೆಳೆಯಿತು. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಸೇರಿ ಹಲವು ಗಣ್ಯರು ಹಾಜರಿದ್ದರು.

Advertisement

ಕಾರ್ಯಕರ್ತರ ಪರಿಶ್ರಮದಿಂದ ಕಾಂಗ್ರೆಸ್‌ ಪಕ್ಷದ ಉಳಿವು ಸಾಧ್ಯ

ನೆಲಮಂಗಲ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹಮತ ನೀಡುವ ಮೂಲಕ ಬಿಜೆಪಿಯನ್ನು ರಾಜ್ಯದಿಂದ ಓಡಿಸಲು ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದರು.

ತಾಲೂಕಿನ ಬೊಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ ತುಮಕೂರಿನಿಂದ ಬೆಂಗ ಳೂರಿಗೆ ಹೋಗುವ ಮಾರ್ಗ  ಮಧ್ಯೆ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಹಾಗೂ ಮಾಜಿ ಸಚಿವ ಅಂಜನಮೂರ್ತಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತದ ಮೂಲಕ ಅಧಿಕಾರಕ್ಕೆ ಬರಬೇಕಾಗಿದೆ. ಕಾರ್ಯಕರ್ತರ ಪರಿಶ್ರಮದಿಂದ ಪಕ್ಷದ ಉಳಿವು ಸಾಧ್ಯ ಎಂದರು.

ಕಾರ್ಯಕರ್ತರ ಜಮಾವಣೆ: ತಾಲೂಕಿನ ಮುಖಂಡರು ರಾಹುಲ್‌ ಗಾಂಧಿ ಸ್ವಾಗತಕ್ಕೆ ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಕರೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 48ರ ಟೋಲ್‌ ಬಳಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next