ಬೂಸಾನ್ (ರಿಪಬ್ಲಿಕ್ ಆಫ್ ಕೊರಿಯಾ): ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನ ತನ್ನ 3ನೇ ಪಂದ್ಯದಲ್ಲಿ ಭಾರತ 62-17 ಅಂಕಗಳ ಭಾರೀ ಅಂತರದಿಂದ ಜಪಾನ್ ತಂಡವನ್ನು ಮಣಿಸಿದೆ.
ಇದು ಹಾಲಿ ಚಾಂಪಿಯನ್ ಖ್ಯಾತಿಯ ಭಾರತ ಸಾಧಿಸಿದ ಸತತ 3ನೇ ಗೆಲುವು. ಮೊದಲ ಪಂದ್ಯದಲ್ಲಿ ಕೊರಿಯಾವನ್ನು 76-13ರಿಂದ, ಬಳಿಕ ಚೈನೀಸ್ ತೈಪೆಯನ್ನು 53-19 ಅಂಕಗಳಿಂದ ಸೋಲಿಸಿತ್ತು.
ಮಂಗಳವಾರವಷ್ಟೇ ಕೊರಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಅಸ್ಲಾಮ್ ಇನಾಮಾªರ್ ಸತತ 2ನೇ “ಸೂಪರ್ ಟೆನ್’ ಸಾಧನೆಗೈದರು. ಕೂಟದಲ್ಲಿ ಅತ್ಯಧಿಕ ಅಂಕ ಗಳಿಸಿದ ಹೆಗ್ಗಳಿಕೆ ಇನಾಮಾªರ್ ಅವರದ್ದಾಗಿದೆ. ರಕ್ಷಣಾ ವಿಭಾಗದಲ್ಲಿ ಪರ್ವೇಶ್ ಭೈನ್ಸ್‌ವಾಲ್ ಮಿಂಚಿದರು.
ಮೊದಲಾರ್ಧದಲ್ಲಿ ಭಾರತ 32-6 ಅಂಕಗಳ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ಪವನ್ ಸೆಹ್ರಾವತ್ ಸರ್ವಾಧಿಕ 6 ಅಂಕ ಗಳಿಸಿದ್ದರು. ಭಾರತ ಎದುರಾಳಿಯನ್ನು ಒಟ್ಟು 6 ಸಲ ಆಲೌಟ್ ಮಾಡಿತು. ಮೊದಲ ಆಲೌಟ್ ಪಂದ್ಯದ 4ನೇ ನಿಮಿಷದಲ್ಲೇ ದಾಖಲಾಯಿತು. ಆಗಲೇ ಭಾರತ 18-0 ಭರ್ಜರಿ ಮುನ್ನಡೆ ಸಾಧಿಸಿತ್ತು.
ಭಾರತ ಮತ್ತು ಜಪಾನ್ ಸತತ 2 ಪಂದ್ಯಗಳನ್ನು ಗೆದ್ದು ಈ ಹೋರಾಟಕ್ಕೆ ಅಣಿಯಾಗಿದ್ದವು. ಜಪಾನ್‌ನ 2 ಗೆಲುವು ಹಾಂಕಾಂಗ್ (85-11) ಮತ್ತು ಕೊರಿಯಾ ವಿರುದ್ಧ ದಾಖಲಾಗಿತ್ತು (45-18). ಆದರೆ ಭಾರತದ ವಿರುದ್ಧ ಅಬ್ಬರಿಸಲಾಗಲಿಲ್ಲ.
ಗುರುವಾರದ ಪಂದ್ಯದಲ್ಲಿ ಭಾರತ ಇನ್ನೊಂದು ಬಲಿಷ್ಠ ತಂಡವಾದ ಇರಾನ್ ವಿರುದ್ಧ ಸೆಣಸಲಿದೆ.
ಶುಕ್ರವಾರ ಫೈನಲ್
6 ವರ್ಷಗಳ ಬಳಿಕ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿವೆ. ಇವುಗಳೆಂದರೆ ಭಾರತ, ಇರಾನ್, ಜಪಾನ್, ಕೊರಿಯಾ, ಚೈನೀಸ್ ತೈಪೆ ಮತ್ತು ಹಾಂಕಾಂಗ್. ಇದು ರೌಂಡ್ ರಾಬಿನ್ ಮಾದರಿಯ ಮುಖಾಮುಖೀಯಾಗಿದ್ದು, ಎಲ್ಲ ತಂಡಗಳು ಒಮ್ಮೆ ಎದುರಾಗುತ್ತವೆ. ಅಗ್ರ ತಂಡಗಳೆರಡು ಶುಕ್ರವಾರದ ಫೈನಲ್‌ನಲ್ಲಿ ಎದುರಾಗಲಿವೆ.