ಉಡುಪಿ: ಭಾಗವತದಲ್ಲಿ ಹೇಳಿದಂತೆ ಆಧುನಿಕ ಜಗತ್ತು ದಿನೇದಿನೇ ಆತುರವಾಗುತ್ತಿದೆ. ವೈವಾಹಿಕ ಆತುರತೆ, ಹಣ ಮಾಡುವ ಆತುರತೆಇತ್ಯಾದಿ ಆತುರಗಳು ಜನ ವಾಮ ಮಾರ್ಗ ಅನುಸರಿಸುವಂತೆ ಮಾಡಿದೆ. ಯಾವುದೇ ಆತುರತೆಯನ್ನು ತಡೆದುಕೊಳ್ಳುವುದೇ ದೊಡ್ಡ ತಪಸ್ಸು ಎಂದು ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಅವರು ಹಿರಿಯಡಕ ಬಳಿಯ ಪುತ್ತಿಗೆಯ ಮೂಲಮಠದಲ್ಲಿ ಶುಕ್ರ ವಾರ ನಡೆದ ನರಸಿಂಹ ಜಯಂತಿ ಉತ್ಸವ ಮತ್ತು 35ನೇ ಪುತ್ತಿಗೆ ವಿದ್ಯಾಪೀಠದ ಘಟಿಕೋತ್ಸವದಲ್ಲಿ ಮಂಗಳಾನುವಾದ ಮಾಡಿದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಲ್ಲವಿಧದ ಸೆಳೆತ -ಆತುರಗಳನ್ನು ತಡೆದು ಕೊಂಡು ಉತ್ತಮ ಅಧ್ಯಯನ ಮಾಡಿ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದುಕೊಳ್ಳುವುದೇ ದೊಡ್ಡ ತಪಸ್ಸು. ಇದನ್ನೇ ಶ್ರೀವಾದಿರಾಜರು ‘ತಾಳುವಿಕೆಗಿಂತ ತಪವು ಇಲ್ಲ’ ಎಂದು ಉಪದೇಶಿಸಿದ್ದಾರೆ ಎಂದರು.
ಅಧ್ಯಯನವನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಂಗಾರದ ಕಂಕಣ ದೊಂದಿಗೆ ಪ್ರಮಾಣಪತ್ರ ನೀಡಿ ಅನುಗ್ರಹಿಸಿದರು.
ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ‘ಮಾಯಾವಾದಖಂಡನ’ ಗ್ರಂಥ ವನ್ನು, ಶ್ರೀಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ‘ಮಣಿ ಮಂಜರೀ’ ಕಾವ್ಯದ ಅನು ವಾದವನ್ನು ಮಾಡಿದರು.
ಘಟಿಕೋತ್ಸವದ ನಿಮಿತ್ತ ವಿದ್ವಾನ್ ಅಡ್ವೆ ಲಕ್ಷ್ಮೀಶ ಆಚಾರ್ಯ, ಹೆಬ್ರಿ ಗೋಪಾಲಾಚಾರ್ಯ. ಪಳ್ಳಿ ಪುಟ್ಟಣ್ಣ ಭಟ್ ಇವರಿಗೆ ‘ನರಸಿಂಹಾನುಗ್ರಹ ಪ್ರಶಸ್ತಿ’ ನೀಡಿ ಸಮ್ಮಾನಿಸಲಾಯಿತು.
ವಿದ್ವಾನ್ ಬಿ. ಗೋಪಾಲಾ ಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಚಾರ್ಯರಾದ ವಿದ್ವಾನ್ ಸುನಿಲ್ ಆಚಾರ್ಯ ಅವರು ಸ್ವಾಗತಿಸಿದರು.