Advertisement

2ನೇ ದಿನ ಭಕ್ತರಿಗೆ ಹಾಸನಾಂಬೆ ಸುಸೂತ್ರ ದರ್ಶನ

09:32 PM Oct 18, 2019 | Team Udayavani |

ಹಾಸನ: ಹಾಸನಾಂಬೆಯ ದರ್ಶನದ ಸಂದರ್ಭದಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಗೊಂದಲ ಉಂಟಾಗುತ್ತಿದ್ದುದು ಸಹಜ. ಆದರೆ ಈ ವರ್ಷ ಹಾಸನಾಂಬೆ ಬಾಗಿಲು ತೆರೆದ ನಂತರ 2ನೇ ದಿನವಾದ ಶುಕ್ರವಾರದವರೆಗೆ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಭಕ್ತರಿಗೆ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

Advertisement

ಶುಕ್ರವಾರ ಮುಂಜಾನೆಯಿಂದ ಸಂಜೆವರೆಗೂ ಭಕ್ತರು ಸುಸೂತ್ರವಾಗಿ ದೇವಿ ದರ್ಶನ ಪಡೆದರು. 2 ನೇ ದಿನ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬರದಿದ್ದರೂ ಸಾಧಾರಣ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನ ಪಡೆದರು. ಸಂಜೆ 5.30ಕ್ಕೆ ಮಳೆ ಆರಂಭವಾಯಿತು.

ಆದರೆ ಸರದಿ ಸಾಲುಗಳಿಗೆ ವಾಟರ್‌ ಪ್ರೂಫ್ ಛಾವಣಿ ಅಳವಡಿಸಿರುವುದರಿಂದ ಭಕ್ತರಿಗೆ ಮಳೆಯಿಂದ ಅಡಚಣೆಯಾಗಲಿಲ್ಲ. ಸರದಿ ಸಾಲಿನಲ್ಲಿ ನಿಂತವರಿಗೆ ನೀರಡಿಕೆಯಾದರೆ ಸ್ಕೌಟ್ಸ್‌, ಗೈಡ್ಸ್‌, ಸೇವಾದಳ ಸ್ವಯಂ ಸೇವಕರು ಕುಡಿವ ನೀರು ಪೂರೈಸುತ್ತಿದ್ದಾರೆ. ಸಾಲುಗಳ ಮಧ್ಯೆ ಅಲ್ಲಲ್ಲಿ ಪ್ಲಾಸ್ಟಿಕ್‌ ಕುರ್ಚಿ ಹಾಕಿರುವುದರಿಂದ ಭಕ್ತರು ನಿರಾಯಾಸವಾಗಿ ದೇವಿ ದರ್ಶನ ಪಡೆದರು.

ನೂಕುನುಗ್ಗಲು ಕಂಡು ಬರಲಿಲ್ಲ: ಸರದಿ ಸಾಲಿನಲ್ಲಿ ನಿಂತು ಧರ್ಮ ದರ್ಶನ ಪಡೆಯಲು ಸಮಯವಿಲ್ಲದವರು ದೇವಿ ನೇರ ದರ್ಶನಕ್ಕೆ 1000 ರೂ. ಮತ್ತು 300 ರೂ. ಟಿಕೆಟ್‌ನ ವ್ಯವಸ್ಥೆ ಮಾಡಲಾಗಿದೆ. ಆದರೆ 2ನೇ ದಿನವಾದ ಶುಕ್ರವಾರ 1000 ರೂ. ಟಿಕೆಟ್‌ಗೆ ಹೆಚ್ಚು ಬೇಡಿಕೆ ಕಂಡು ಬರಲಿಲ್ಲ.

300 ರೂ. ಟಿಕೆಟ್‌ ಮತ್ತು ವಿಶೇಷ ಪಾಸು ಹೊಂದಿರುವವರ ಸಾಲಿನಲ್ಲಿಯೂ ನೂಕು ನುಗ್ಗಲು ಬರಲಿಲ್ಲ. ಶಿಫಾರಸು, ಪ್ರಭಾವ ಬಳಸಿ ಸಾವಿರಾರು ಮಂದಿ ದೇವಸ್ಥಾನದ ಪ್ರಧಾನ ದ್ವಾರದ ಮೂಲಕವೇ ದೇವಾಲಯ ಪ್ರವೇಶಿಸಿ ಹಾಸನಾಂಬೆ ದರ್ಶನ ಪಡೆದರು. ಆದರೆ ಧರ್ಮದರ್ಶನದ ಸಾಲುಗಳಲ್ಲಿ ಮಾತ್ರ ಸಾವಿರಾರು ಭಕ್ತರು ಸಾವಧಾನವಾಗಿ ಸಾಗಿ ದರ್ಶನ ಪಡೆದು ಪುನೀತರಾದರು.

Advertisement

ಪರದೆಗಳ ಮೂಲಕ ಪ್ರದರ್ಶನ: ಹಾಸನಾಂಬೆ ಮಹಿಮೆಯನ್ನು ಸಾರುವ ಮಾಹಿತಿಯನ್ನು ಡಿಜಿಟಲ್‌ ಪರದೆಗಳ ಮೂಲಕ ಪ್ರದರ್ಶಿಸಲಾಗುತ್ತಿದ್ದು ಭಕ್ತರಿಗೆ ಬೇಸರವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹೊರಾಂಗಣ ಹಾಗೂ ಒಳಾಂಗಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಭದ್ರತೆಗಾಗಿ ಭಾರೀ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ವರ್ಷ ಹಾಸನಾಂಬೆ ದರ್ಶನಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲ, ನೂಕು ನುಗ್ಗಲು ಇಲ್ಲದೆ ಸುಸೂತ್ರವಾಗಿ ಈ ವರ್ಷ ದರ್ಶನ ಪಡೆದೆವು. ದೇವಾಲಯದ ಒಳ ಮತ್ತು ಹೊರ ಆವರಣದಲ್ಲಿಯೂ ಆಕರ್ಷಕ ಅಲಂಕಾರ, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.
-ವೇದಾವತಿ, ಬೀಕನಹಳ್ಳಿ

ರಜೆಯ ದಿನಗಳಲ್ಲಿ ಸಹಜವಾಗಿ ದೇವಿ ದರ್ಶನಕ್ಕೆ ನೂಕು ನುಗ್ಗಲು ಉಂಟಾಗುತ್ತದೆ. ಹಾಗಾಗಿ ಶುಕ್ರವಾರವೇ ನಮ್ಮ ಕುಂಟುಂಬ ಹಾಸನಾಂಬೆ ದರ್ಶನ ಪಡೆದವು. ಈ ವರ್ಷ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ದರ್ಶನವಾಯಿತು.
-ಗಿರೀಶ್‌, ಹಾಸನ

Advertisement

Udayavani is now on Telegram. Click here to join our channel and stay updated with the latest news.

Next