Advertisement
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ದೇವಾಲಯದ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್ ಅವರ ಸಮ್ಮುಖದಲ್ಲಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು, ದೇವಾಲಯದ ಬಾಗಿಲು ಮುಚ್ಚುವ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ನಂತರ ದೇವಾಲಯದ ಬಾಗಿಲು ಮುಚ್ಚಿ ಬೀಗ ಮುದ್ರೆ ಹಾಕಲಾಯಿತು.
Related Articles
Advertisement
ಹಾಸನಾಂಬೆ ದರ್ಶನೋತ್ಸವ ಯಶಸ್ವಿ: ದೇವಾಲಯದ ಬಾಗಿಲು ಮಚ್ಚಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಯಾವುದೇ ಅಡಚಣೆಗಳಿಲ್ಲದೆ ಹಾಸನಾಂಬೆಯ ದರ್ಶನೋತ್ಸವ ಸುಸೂತ್ರವಾಗಿ ಪೂರ್ಣಗೊಂಡಿದೆ. ಒಟ್ಟು 11 ದಿನಗಳ ಕಾಲ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ. ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ.
ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಮುಂದಿನ ವರ್ಷವೂ ಇದೇ ರೀತಿ ಉತ್ತಮ ಮಳೆ, ಬೆಳೆಯಾಗಲಿ, ಹಾಸನಾಂಬೆಯು ಸರ್ವರಿಗೂ ಒಳಿತು ಮಾಡಲಿ ಪ್ರಾರ್ಥಿಸಿದರು. ಭಕ್ತಾದಿಗಳು ಸುಲಲಿತವಾಗಿ ಹಾಸನಾಂಬ ದೇವಿಯ ದರ್ಶನ ಮಾಡಲು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿ ಸಹಕರಿಸಿದ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಸಾವಧಾನವಾಗಿ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದ ಭಕ್ತರನ್ನು ಸಚಿವರ ಅಭಿನಂದಿಸಿದರು.
ಈ ವರೆಗೆ 1.6 ಕೋಟಿ ರೂ. ಆದಾಯ: ಜಿಲ್ಲಾಧಿಕಾರಿ ಆರ್ ಗಿರೀಶ್ ಮಾತನಾಡಿ, ಹಾಸನಾಂಬೆಯ ದರ್ಶನ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ದೇವಿಯ ನೇರ ದರ್ಶನಕ್ಕೆ ನಿಗದಿಪಡಿಸಿದ್ದ 300 ರೂ. ಹಾಗೂ 1000 ರೂ. ಟಿಕೆಟ್ ಮಾರಾಟ ಹಾಗೂ ಪ್ರಸಾದದ ಲಾಡು ಮಾರಾಟದಿಂದ ಸುಮಾರು 1.6 ಕೋಟಿ ರೂ. ಸಂಗ್ರಹವಾಗಿದೆ. ಈ ವರ್ಷ 3 ರಿಂದ 4 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿರುವ ಅಂದಾಜಿದೆ ಎಂದು ಹೇಳಿದರು.
ಇಂದು ಹುಂಡಿ ಎಣಿಕೆ: ದೇವಸ್ಥಾನದ ಹುಂಡಿಗಳನ್ನು ಬುಧವಾರ(ಅ.30) ಎಣಿಕೆ ಮಾಡಲಾಗುವುದು. ಆನಂತರವಷ್ಟೇ ಈ ವರ್ಷ ಹಾಸನಾಂಬ ದೇಗುಲಕ್ಕೆ ಬಂದಿರುವ ಆದಾಯದ ಮಾಹಿತಿ ಸಿಗಲಿದೆ ಎಂದ ಅವರು, ಹಾಸನಾಂಬ ದೇಗುಲದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮಚ್ಚುವ ದಿನದವರೆಗೂ ಭಕ್ತರು, ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ವಿಶೇಷವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ: ಹಾಸನಾಂಬ ದೇವಾಲಯದ ಬಾಗಿಲು ಮಚ್ಚುವ ಮುನ್ನಾದಿನ ಸೋಮವಾರ ರಾತ್ರಿ ಶ್ರೀ ಸಿದ್ದೇಶ್ವರ ಸ್ವಾಮಿ ಚಂದ್ರಮಂಡಲ ರಥೋತ್ಸವ ನೆರವೇರಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವು ಮಂಗಳವಾರ ಮುಂಜಾನೆ ಹಾಸನಾಂಬಾ ದೇವಾಲಯದ ಆವರಣಕ್ಕೆ ಆಗಮಿಸಿತು. ಆ ಸಂದರ್ಭಲ್ಲಿ ನಡೆದ ಕೆಂಡೋತ್ಸವದದಲ್ಲಿ ಭಕ್ತರು ಕೆಂಡೋತ್ಸವ ಹಾದು ಭಕ್ತಭಾವ ಮೆರೆದರು. ಸಪ್ತ ಮಾತೃಕೆಯರ ಪ್ರತಿ ರೂಪವಾದ ಹಾಸನಾಂಬೆಯು ಸಹೋದರ ಸಿದ್ದೇಶ್ವರ ಸ್ವಾಮಿಯನ್ನು ವರ್ಷಕ್ಕೊಮ್ಮೆ ಭೇಟಿಯಾಗುವ ಸಂದರ್ಭವೇ ಕೆಂಡೋತ್ಸವ ಎಂಬ ನಂಬಿಕೆ ಇದೆ. ಭಕ್ತರು ಕೆಂಡೋತ್ಸವದಲ್ಲಿ ಭಕ್ತಿ ಪರವಶರಾಗಿ ಪಾಲ್ಗೊಳ್ಳುತ್ತಾರೆ.
2020 ರ ನವೆಂಬರ್ 5 ರಿಂದ ದರ್ಶನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಭಕ್ತರು ಮುಂದಿನ ವರ್ಷ ನವೆಂಬರ್ 5 ರ ವರೆಗೂ ಕಾಯಬೇಕು. 2010ರ ನವೆಂಬರ್ 5 ರಿಂದ 17 ರ ವರೆಗೆ ಅಂದರೆ ಮುಂದಿನ ವರ್ಷ 14 ದಿನ ಹಾಸನಾಂಬೆಯ ದರ್ಶನ ಭಕ್ತರಿಗೆ ಸಿಗಲಿದೆ. ಮುಂದಿನ ವರ್ಷ ಬಲಿಪಾಡ್ಯಮಿ ಮತ್ತು ಅಮಾವಾಸ್ಯೆ ನ.16 ರಂದು ಬರಲಿದ್ದು, ನ.17 ರಂದು ಹಾಸನಾಂಬೆಯ ಬಾಗಿಲು ಮುಚ್ಚಲಾಗುವುದು.