ಹಾಸನ: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ರೀತಿಯ ಘಟನೆಗಳು ಮರುಕಳಿಸುತ್ತಿದ್ದು ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳದಿಂದ ಬೇಸತ್ತ ಸಾಫ್ಟ್ ವೇರ್ ಎಂಜಿನಿಯರೊಬ್ಬರು ಹೇಮಾವತಿ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ತಾಲೂಕಿನ ಶೆಟ್ಟಿಹಳ್ಳಿ ಬಳಿ ಹೇಮಾವತಿ ಹಿನ್ನೀರಿಗೆ ಹಾಸನ-ಆಲೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿಂದ ಹಾರಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಬುಧವಾರ ಬೆಳಗ್ಗೆ ಶವ ಪತ್ತೆಯಾಗಿದೆ.
ಹಾಸನ ಇಂದಿರಾ ನಗರದ ಜಿ.ಜೆ.ಪ್ರಮೋದ್ (35) ಡಿ. 29ರಂದು ಮೊಬೈಲ್ ಮನೆಯಲ್ಲೇ ಬಿಟ್ಟು ಬೈಕ್ನಲ್ಲಿ ಹೊರ ಹೋಗಿದ್ದರು. ಬೈಕ್ ಶೆಟ್ಟಿಹಳ್ಳಿ ಸಮೀಪ ಹೇಮಾವತಿ ಹಿನ್ನೀರಿನ ಬಳಿ 3 ದಿನಗಳ ಹಿಂದೆ ಪತ್ತೆಯಾಗಿತ್ತು. ಆದರೆ ಬುಧವಾರ ಬೆಳಗ್ಗೆ ಪ್ರಮೋದ್ ಶವ ಪತ್ತೆಯಾಗಿದೆ.
ಸೊಸೆ ಹಾಗೂ ಆಕೆಯ ಮನೆಯವರ ಕಿರುಕುಳದಿಂದಲೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಮೋದ್ ಪಾಲಕರು, ಸಂಬಂಧಿಕರು ಆರೋಪಿಸಿದ್ದಾರೆ.
ಜಿ.ಜೆ.ಪ್ರಮೋದ್ ಮತ್ತು ಹೇಮಾವತಿ ನಗರದ ನಿವಾಸಿ ನಂದಿನಿ 7 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಮಗು ಇದೆ. ಪ್ರಮೋದ್ ಬೆಂಗಳೂರಿನ ಬೆಂಝ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರೆ ನಂದಿನಿ ಕಾಲೇಜೊಂದರಲ್ಲಿ ಬೋಧಕಿಯಾಗಿದ್ದರು. ಇತ್ತೀಚೆಗೆ ಪತ್ನಿ, ಮತ್ತವರ ಕಡೆಯಿಂದ ಕಿರುಕುಳ ಹೆಚ್ಚಾಗಿದ್ದರಿಂದ ಪ್ರಮೋದ್ ಸಾಕಷ್ಟು ಮನನೊಂದಿದ್ದರು ಎನ್ನಲಾಗಿದೆ.
ಶವ ನೋಡಲೂ ಬಿಡಲಿಲ್ಲ
ಶವಾಗಾರದಲ್ಲಿದ್ದ ಪತಿಯ ಮೃತದೇಹ ನೋಡಲು ತನ್ನ ತಾಯಿ ಮತ್ತು ಮಗುವಿನೊಂದಿಗೆ ನಂದಿನಿ ಬಂದಾಗ ಪ್ರಮೋದ್ ಸಂಬಂಧಿಕರು ನಂದಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆಯಿತು. ಬಳಿಕ ನಂದಿನಿ ಮತ್ತು ಆಕೆಯ ತಾಯಿಯನ್ನು ಪೊಲೀಸರು ಆಟೋದಲ್ಲಿ ವಾಪಸ್ ಕಳಿಸಿಕೊಟ್ಟರು.