ಹಾಸನ: ಕಳೆದ ವರ್ಷ ಸಿಯಾಚಿನ್‌ನ ಸೇನಾ ಶಿಬಿರದ ಬಳಿ ನಡೆದಿದ್ದ ಹಿಮಪಾತಕ್ಕೆ ಸಿಲುಕಿ ಹಾಸನ ತಾಲೂಕು ತೇಜೂರಿನ ಯೋಧ ನಾಗೇಶ್ ಹಾಗೂ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ ಹುತಾತ್ಮರಾದ ಘಟನೆ ಮರೆಮಾಸುವ ಮುನ್ನವೇ ಹಾಸನದ ಇನ್ನೊಬ್ಬ ಯೋಧ ಜಮ್ಮು ಕಾಶ್ಮೀರದಲ್ಲಿ ನಡೆದ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೇನಾ ಶಿಬಿರದ ಮೇಲೆ ಬುಧವಾರ ಭಾರೀ ಹಿಮಪಾತವಾಗಿತ್ತು. ಇದರಲ್ಲಿ ಮೃತ ಪಟ್ಟ ಯೋಧರ ಪೈಕಿ ಹಾಸನ ತಾಲೂಕಿನ ದೇವಿಹಳ್ಳಿಯ ಸಂದೀಪ್‌ಶೆಟ್ಟಿ (26) ಕೂಡ ಒಬ್ಬರು. ಸಂದೀಪ್‌ಶೆಟ್ಟಿ ಹುತಾತ್ಮರಾಗಿರುವ ಸುದ್ದಿ ಅವರ ಕುಟುಂಬಕ್ಕೆ ಶುಕ್ರವಾರ ಸಂಜೆ ದೊರೆತಿದೆ. ಇದರಿಂದ ಕುಟುಂಬ ಹಾಗೂ ಇಡೀ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿದೆ. ಶನಿವಾರ ಮಧ್ಯಾಹ್ನದ ವೇಳೆ ಹಾಸನ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೇವಿಹಳ್ಳಿಯ ಪುಟ್ಟರಾಜು ಮತ್ತು ಗಂಗಮ್ಮ ದಂಪತಿಗೆ ಸಂದೀಪ್ ಶೆಟ್ಟಿ ಹಾಗೂ ಒಬ್ಬ ಮಗಳಿದ್ದಾಳೆ. ಮಗಳ ಮದುವೆಯಾಗಿದೆ. ಹಾಸನದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುವರೆಗೆ ಓದಿದ್ದ ಸಂದೀಪ್‌ಶೆಟ್ಟಿ ಶಿಕ್ಷಕರಾಗುವ ಕನಸು ಕಂಡಿದ್ದರು. ಬಳಿಕ ಸೇನೆ ಸೇರಲು ನಿಶ್ಚಯಿಸಿ 2010ರಲ್ಲಿ ಸೇನೆ ಸೇರಿದ್ದರು. ಮೊದಲು ಗುಜರಾತ್ ಸೇನಾ ವಲಯದಲ್ಲಿ ಸೇವೆ ಸಲ್ಲಿಸಿದ್ದ ಸಂದೀಪ್ ಅವರು, ಬಳಿಕ ಜಮ್ಮು – ಕಾಶ್ಮೀರಕ್ಕೆ ವರ್ಗವಾಗಿದ್ದರು. ಸೇನೆಗೆ ಸೇರಿದ್ದ 7 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಗ್ರಾಮಕ್ಕೆ ಬಂದಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಬ್ಬ ಹಾಗೂ ಗ್ರಾಮದ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸೇನೆಯ ಸೇವೆಗೆ ಹೋಗಿದ್ದರು. ಇದೀಗ ಶವವಾಗಿ ಗ್ರಾಮಕ್ಕೆ ಬರುತ್ತಿರುವುದು ಹೆತ್ತವರಿಗೆ ಆಘಾತವನ್ನುಂಟು ಮಾಡಿದೆ. ಇಡೀ ಗ್ರಾಮ ರೋಧಿಸುತ್ತಿದೆ.
ಜಿಲ್ಲಾಡಳಿತಕ್ಕೆ ಸಂಜೆ ಮಾಹಿತಿ: ಸಂದೀಪ್‌ಶೆಟ್ಟಿ ಅವರು ಹುತಾತ್ಮರಾಗಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಶುಕ್ರವಾರ ಸಂಜೆ ತಲುಪಿದೆ. ಶನಿವಾರ ಯೋಧನ ಪಾರ್ಥಿವ ಶರೀರಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ಸಲ್ಲಿಸಲಾಗುವುದು. ಬಳಿಕ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಯೋಧನ ಸಾವಿಗೆ ಮಾಜಿ ಪ್ರಧಾನಿ ದೇವೇಗೌಡರು, ಶಾಸಕ ಪ್ರಕಾಶ್ ಮತ್ತಿತರರು ಕಂಬನಿ ಮಿಡಿದಿದ್ದಾರೆ.
ಫೆ.22ಕ್ಕೆ ವಿವಾಹ ನಿಗದಿಯಾಗಿತ್ತು
ಹಾಸನ: ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ ಸಂದೀಪ್ ಶೆಟ್ಟಿ ವಿವಾಹವು ಫೆ.22ಕ್ಕೆ ನಿಗದಿಯಾಗಿತ್ತು. ಕಳೆದ ಬಾರಿ ಸಂದೀಪ್ ಬಂದಾಗ ಬೆಂಗಳೂರಿನ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಮದುವೆ ಸಿದ್ಧತೆಯನ್ನು ತಂದೆ ತಾಯಿ ಮಾಡುತ್ತಿದ್ದರು. ಮದುವೆ ಮಾಡಿಕೊಳ್ಳಲು ಸಂಭ್ರಮದಿಂದ ಬರಬೇಕಾಗಿದ್ದ ಮಗನ ಬದಲು ಆತ ಶವವನ್ನು ಬರಮಾಡಿಕೊಳ್ಳಬೇಕಿದೆ. ಮಗನ ಮದುವೆ ಮಾಡಿ ನೆಮ್ಮದಿಯಿಂದ ಇರಬೇಕು ಎಂದು ಬಯಸಿದ್ದೇವು. ಇದೀಗ ಆತನೇ ಹೆಣವಾಗಿ ಬರುತ್ತಿದ್ದಾನೆ ಎಂದು ರೋಧಿಸುತ್ತಿರುವ ಪುಟ್ಟರಾಜು ಹಾಗೂ ಗಂಗಮ್ಮ ದಂಪತಿಗೆ ಅನಾಥಭಾವ ಕಾಡುವಂತಾಗಿದೆ.