Advertisement

Hassan; “ಮೈತ್ರಿ ಅಭ್ಯರ್ಥಿ ಪರ ಪ್ರೀತಂ ಕೆಲಸ ‘; ರಾಧಾ ಮೋಹನ್‌ ಅಗರ್ವಾಲ್‌

10:48 PM Apr 06, 2024 | Team Udayavani |

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂಬ ದೂರು ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಹೇಳಿದರು.

Advertisement

ಪ್ರೀತಂ ಗೌಡ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ದೂರಿನ ಹಿನ್ನೆಲೆಯಲ್ಲಿ ಹಾಸನದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ತುರ್ತು ಸಮನ್ವಯ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಹಾಸನದಲ್ಲಿ ಸಮೀಕ್ಷೆ ನಡೆಸಿದ್ದೇವೆ, ಆ ರೀತಿ ಎಲ್ಲೂ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಮುಖಂಡರಿಗೆ ಎಲ್ಲಿ ಜವಾಬ್ದಾರಿ ವಹಿಸಲಾಗುತ್ತದೆಯೋ ಅಲ್ಲಿ ಅವರವರ ಕೆಲಸದ ಮೌಲ್ಯಮಾಪನ ನಡೆಯಲಿದೆ. ಪ್ರೀತಂ ಗೌಡರಿಗೆ ಮೈಸೂರಿನಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ. ಅವರು ಮೈಸೂರು ಬಿಟ್ಟು ಬಂದರೆ ನಾನೇ ಅವರ ವಿಚಾರಣೆ ನಡೆಸುತ್ತೇನೆ ಎಂದು ಹೇಳಿದರು.

ಹಾಸನದಲ್ಲಿ ಇರಬೇಡಿ ಎಂದು ಹೇಳಿದ್ದೇನೆ
ಪ್ರೀತಂ ಗೌಡರಿಗೆ ಹಾಸನದಲ್ಲಿ ಇರಬೇಡಿ ಎಂದು ನಾನೇ ಹೇಳಿದ್ದೇನೆ. ನಮಗೆ ಹಾಸನ ಎಷ್ಟು ಮುಖ್ಯವೋ, ಮೈಸೂರು ಅಷ್ಟೇ ಮುಖ್ಯ. ಪ್ರೀತಂ ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರತಿದಿನ ಅವರು ಹಾಸನದಲ್ಲೇ ಇರಬೇಕು ಎಂದು ನಿರೀಕ್ಷಿಸುವುದಿಲ್ಲ. ಅವರು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಸಭೆಗೆ ಪ್ರೀತಂ ಗೌಡ ಬಂದಿದ್ದರು, ನಾನು ಉತ್ತರ ಪ್ರದೇಶದವನು. ಅಲ್ಲಿ 20 ವರ್ಷ ಜನಪ್ರತಿನಿಧಿಯಾಗಿದ್ದೇನೆ. ಈಗ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ನಿಯೋಜಿಸಿದ ಕಡೆ ಕೆಲಸ ಮಾಡುತ್ತಿದ್ದೇನೆ. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡೂ ಕಡೆ ಹೇಗೆ ಇರಲು ಸಾಧ್ಯ ಎನ್ನುವ ಮೂಲಕ ಪ್ರೀತಂ ಗೌಡ ಅವರನ್ನು ಸಮರ್ಥಿಸಿಕೊಂಡರು.

ಪ್ರೀತಂ ಗೌಡರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರ ಜತೆ ಜೆಡಿಎಸ್‌ ನಾಯಕರ ವರ್ತನೆ ಬಗ್ಗೆ ಅಗರ್ವಾಲ್‌ ಅವರು ಸಮನ್ವಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

Advertisement

ಪ್ರೀತಂಗೆ ಫೋನ್‌ ಯಾಕೆ ಮಾಡಿಲ್ಲ?
ಇದುವರೆಗೆ ನೀವು ಪ್ರೀತಂ ಗೌಡಗೆ ಯಾಕೆ ಫೋನ್‌ ಮಾಡಿಲ್ಲ ಎಂದು ಪ್ರಜ್ವಲ್‌ಗೆ ಪ್ರಶ್ನಿಸಿದ ಅಗರ್ವಾಲ್‌ ಅವರು, ಪ್ರೀತಂಗೌಡ ಬಿಟ್ಟು ಬಿಜೆಪಿಯ ಬೇರೆ ನಾಯಕರನ್ನು ಪ್ರಜ್ವಲ್‌ ರೇವಣ್ಣ ಭೇಟಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಜೆಡಿಎಸ್‌ ನಾಯಕರೂ ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಪ್ರೀತಂಗೌಡ ಖಂಡಿತ ಮೈತ್ರಿ ಪರ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಮಾತನಾಡಿದ ಪ್ರಜ್ವಲ್‌ ರೇವಣ್ಣ ಅವರು, ಪ್ರೀತಂ ಗೌಡರಿಗೆ ಮೈಸೂರು ಉಸ್ತುವಾರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್‌ ಒಗ್ಗಟ್ಟಾಗಿ ಚುನಾವಣ ಪ್ರಚಾರ ಮಾಡುತ್ತೇವೆ. ಆಗ ಪ್ರೀತಂಗೌಡ ಅವರೂ ನಮ್ಮ ಜತೆಗಿದ್ದು, ಒಗ್ಗಟ್ಟಾಗಿ ಹೋಗುವ ಕೆಲಸ ಮಾಡ್ತೀವಿ ಎಂದು ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next