Advertisement

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

10:41 PM Apr 30, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ಬರೋಬ್ಬರಿ 40 ಜಿಬಿ ಪೆನ್‌ ಡ್ರೈವ್‌ನಲ್ಲಿರುವ ಸಾವಿರಾರು ಅಶ್ಲೀಲ ವಿಡಿಯೋವನ್ನು ಎಳೆಎಳೆಯಾಗಿ ಪರಿಶೀಲಿಸುತ್ತಿದೆ.

Advertisement

ಎಸ್‌ಐಟಿಯ ಮೂರು ವಿಶೇಷ ತಂಡಗಳು ಒಂದೊಂದು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈಗಾಗಲೇ 40 ಜಿಬಿಯ 2 ಪೆನ್‌ ಡ್ರೈವ್‌ ಎಸ್‌ಐಟಿ ಕೈ ಸೇರಿದೆ. ಮೂರು ತಂಡಗಳ ಪೈಕಿ ಒಂದು ತಂಡದಲ್ಲಿರುವ ಇನ್‌ಸ್ಪೆಕ್ಟರ್‌ ಸೇರಿ ನಾಲ್ವರು ಪೊಲೀಸ್‌ ಸಿಬ್ಬಂದಿ ಜಪ್ತಿ ಮಾಡಿರುವ 40 ಜಿಬಿಯ ಪೆನ್‌ ಡ್ರೈವ್‌ಗಳಲ್ಲಿರುವ ಸಾವಿರಾರು ಅಶ್ಲೀಲ ವಿಡಿಯೋಗಳನ್ನು ತನಿಖಾ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ನೂರಾರು ಮಹಿಳೆಯರ ವಿಡಿಯೋ ಇರುವುದರಿಂದ ಅದರಲ್ಲಿರುವ ಒಬ್ಬೊಬ್ಬ ಮಹಿಳೆಯರನ್ನು ಗುರುತಿಸುವುದೇ ಎಸ್‌ಐಟಿಗೆ ಸವಾಲಾಗಿದೆ. ಹೀಗಾಗಿ ಸಿಐಡಿ ಸೈಬರ್‌ ವಿಭಾಗದ ಸಿಬ್ಬಂದಿಯ ಸಹಾಯ ಪಡೆಯಲಾಗಿದೆ. ಈಗಾಗಲೇ ವಿಡಿಯೋದಲ್ಲಿರುವ 5ಕ್ಕೂ ಹೆಚ್ಚಿನ ಮಹಿಳೆಯರ ವಿವರ ಪತ್ತೆಹಚ್ಚಲಾಗಿದೆ.

ಎಸ್‌ಐಟಿಯ ಮತ್ತೊಂದು ತಂಡ ಪತ್ತೆಯಾದ ಮಹಿಳೆಯರನ್ನು ಗೌಪ್ಯವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುವ ಕಾರ್ಯ ಪ್ರಾರಂಭಿಸಿದೆ. ಇದುವರೆಗೆ ನಾಲ್ವರು ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಪೆನ್‌ ಡ್ರೈವ್‌ನಲ್ಲಿರುವ ಅಷ್ಟೂ ವಿಡಿಯೋಗಳ ಬಗ್ಗೆ ಇರುವ ವಿವರಗಳನ್ನು ತನಿಖಾಧಿಕಾರಿಗಳು ಶೀಘ್ರದಲ್ಲೇ ಎಸ್‌ಐಟಿ ಮುಖ್ಯಸ್ಥರಿಗೆ ವರದಿ ನೀಡಲಿದ್ದಾರೆ. ಮತ್ತೂಂದೆಡೆ ಜಪ್ತಿ ಮಾಡಿರುವ ಪೆನ್‌ಡ್ರೈವ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್‌) ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದಿರುವ ತನಿಖಾ ತಂಡವು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.

ಸರ್ಕಾರಿ ಅಧಿಕಾರಿಗಳಿಗೆ ಢವಢವ:
ಪೆನ್‌ಡ್ರೈವ್‌ನಲ್ಲಿ ಸೆರೆಯಾದ ಅಶ್ಲೀಲ ವಿಡಿಯೋವನ್ನು ತನಿಖಾ ತಂಡವು ಪರಿಶೀಲಿಸಿದಾಗ ಹಲವಾರು ಸರ್ಕಾರಿ ಮಹಿಳಾ ಅಧಿಕಾರಿಗಳು ಹಾಗೂ ಇನ್ನು ಕೆಲವರು ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವವರು ಇರುವುದು ಕಂಡು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ಉನ್ನತ ಹುದ್ದೆಯಲ್ಲಿರುವ ಮಹಿಳೆಯರು, ಖಾಸಗಿಯಾಗಿ ಉದ್ಯಮ ನಡೆಸುತ್ತಿರುವವರೂ ಹಗರಣದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಕೆಲಸ ಕೊಡಿಸುವುದು, ವರ್ಗಾವಣೆ, ಬಡ್ತಿ ಇತರ ಆಮಿಷಕ್ಕೆ ಒಳಗಾಗಿ ಮಹಿಳಾ ಸರ್ಕಾರಿ ಅಧಿಕಾರಿಗಳು ಆರೋಪಿಯ ಬಲೆಗೆ ಬಿದ್ದಿರುವ ಶಂಕೆ ಮೆಲ್ನೋಟಕ್ಕೆ ಕಂಡು ಬಂದಿದೆ. ವಿಡಿಯೋದಲ್ಲಿರುವ ಒಬ್ಬೊಬ್ಬ ಮಹಿಳೆಯರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಹೀಗಾಗಿ ವೈರಲ್‌ ಆಗಿರುವ ವಿಡಿಯೋದಲ್ಲಿರುವ ಮಹಿಳಾ ಸರ್ಕಾರಿ ಅಧಿಕಾರಿಗಳಿಗೆ ಢವ ಢವ ಶುರುವಾಗಿದೆ.

Advertisement

ಕೆಲ ಸಂತ್ರಸ್ತೆಯರ ವಿಚಾರಣೆ
ಅಶ್ಲೀಲ ವಿಡಿಯೋದಲ್ಲಿ ಸೆರೆಯಾಗಿರುವ ಕೆಲವು ಮಹಿಳೆಯರನ್ನು ವಿಚಾರಣೆ ನಡೆಸಲಾಗಿದೆ. ಮುಖ್ಯವಾಗಿ ವೈರಲ್‌ ಆಗಿರುವ ವಿಡಿಯೋದಲ್ಲಿ ಇರುವುದು ನೀವೇನಾ? ವಿಡಿಯೋ ಮಾಡಿಕೊಂಡಿರುವ ಉದ್ದೇಶವೇನು?, ಆರೋಪಿಯ ಆಮಿಷಕ್ಕೆ ಒಳಗಾಗಿ ಅಥವಾ ಬೆದರಿಕೆಗೆ ಒಳಗಾಗಿ ವಿಡಿಯೋ ಮಾಡಲು ಸಮ್ಮತಿಸಿದಿರಾ? ಎಂಬಿತ್ಯಾದಿ ಪ್ರಶ್ನೆಗಗಳಿಗೆ ವಿಡಿಯೋದಲ್ಲಿದ್ದಾರೆ ಎನ್ನಲಾದ ಮಹಿಳೆಯರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣ ಮುಂದೇನಾಗಬಹುದು ?
ಪ್ರಜ್ವಲ್‌ ರೇವಣ್ಣ ಅವರನ್ನು ವಿಚಾರಣೆ ನಡೆಸಿ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳಬಹುದು. ವಿಡಿಯೋದಲ್ಲಿ ಮಾತನಾಡಿರುವ ಸ್ವರ (ವಾಯ್ಸ)ಯಾರದ್ದು ಎಂಬ ಮಾಹಿತಿಯನ್ನು ಎಫ್ಎಸ್‌ಎಲ್‌ನಿಂದ ತನಿಖಾ ತಂಡವು ವರದಿ ಪಡೆದುಕೊಳ್ಳಲಿದೆ. ಮೊಬೈಲ್‌ ಜಪ್ತಿ ಮಾಡಿ ರಿಟ್ರೈವ್‌ ಮಾಡುವ ಸಾಧ್ಯತೆಗಳಿವೆ. ಇವರ ಮೊಬೈಲ್‌ನಲ್ಲಿ ಕರೆ ಮಾಡಿರುವ ವಿವರ, ವಿಡಿಯೋ ಕರೆಗಳ ವಿವರ ಪರಿಶೀಲಿಸಬಹುದು. ಎಸ್‌ಐಟಿ ಕೊಟ್ಟ ನೋಟಿಸ್‌ಗೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸ್ಪಂದಿಸದಿದ್ದರೆ ಬಂಧಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಎಫ್ಎಸ್‌ಎಲ್‌ ವರದಿ ಆಧರಿಸಿ ಎಸ್‌ಐಟಿ ತನಿಖೆ ಮುಂದೆ ಸಾಗಲಿದೆ. ವಿಡಿಯೋದಲ್ಲಿರುವ ಮಹಿಳೆಯರ ಹೇಳಿಕೆ ಆಧರಿಸಿ ಘಟನಾ ಸ್ಥಳಕ್ಕೆ ತೆರಳಿ ತನಿಖಾಧಿಕಾರಿಗಳು ಮಹಜರು ಮಾಡುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next