Advertisement

Pen Drive Case; ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಬಂಧನ

11:43 PM May 12, 2024 | Team Udayavani |

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ವಿತರಣೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿಯು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡರ ಆಪ್ತರೆನ್ನಲಾದ ಇಬ್ಬರನ್ನು ರವಿವಾರ ಬಂಧಿಸಿದೆ.

Advertisement

ಲಿಖಿತ್‌ ಗೌಡ ಮತ್ತು ಚೇತನ್‌ ಬಂಧಿತರು. ಲಿಖಿತ್‌ ಗೌಡ ಹಾಸನ ನಿವಾಸಿಯಾಗಿದ್ದು, ಚೇತನ್‌ ಹಾಸನ ತಾಲೂಕು ಯಲಗುಂದ ಗ್ರಾಮದವನು.

ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆಂದು ಆರೋಪಿಸಿ ಹಾಸನ ಲೋಕಸಭಾ ಚುನಾವಣೆಯ ಜೆಡಿಎಸ್‌ ಏಜೆಂಟ್‌ ಆಗಿದ್ದ ವಕೀಲ ಪೂರ್ಣಚಂದ್ರ ತೇಜಸ್ವಿ ಅವರು ಎ. 23ರಂದು ಹಾಸನದ ಸೆನ್‌ ಠಾಣೆಯಲ್ಲಿ ಕಾರು ಚಾಲಕ ಕಾರ್ತಿಕ್‌, ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು, ಬೇಲೂರು ತಾಲೂಕು ನಲ್ಕೆ ಗ್ರಾಮದ ನವೀನ್‌ ಗೌಡ, ಲಿಖಿತ್‌ ಗೌಡ ಹಾಗೂ ಚೇತನ್‌ ಎಂಬವರ ಮೇಲೆ ದೂರು ದಾಖಲಿಸಿದ್ದರು. ಈಗ ಲಿಖಿತ್‌ ಗೌಡ ಮತ್ತು ಯಲಗುಂದ ಗ್ರಾಮದ ಚೇತನ್‌ನನ್ನು ಎಸ್‌ಐಟಿ ತಂಡ ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ಕಾರ್ತಿಕ್‌, ಪುಟ್ಟರಾಜು, ನವೀನ್‌ ಗೌಡ ತಲೆಮರೆಸಿಕೊಂಡಿದ್ದಾರೆ.

ಈ ಇಬ್ಬರನ್ನು ಶನಿವಾರ ಮಧ್ಯರಾತ್ರಿ ವಶಕ್ಕೆ ಪಡೆಯಲಾಗಿದ್ದು, ರವಿವಾರ ಬೆಳಗ್ಗೆ ಹಾಸನದ ಸೆನ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಆನಂತರ ಸ್ಥಳ ಮಹಜರು ನಡೆಸಿದ್ದು, ರವಿವಾರ ರಾತ್ರಿ ಅಥವಾ ಸೋಮವಾರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.

ಬಂಧಿತರು ಬಿಜೆಪಿ ಮಾಜಿ ಶಾಸಕನ ಆಪ್ತರು
ಬಂಧಿತ ಲಿಖಿತ್‌ ಗೌಡ ಮತ್ತು ಚೇತನ್‌ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ಅವರ ಬೆಂಬಲಿಗರು. ಪ್ರೀತಂ ಗೌಡ ಅವರ ಕಚೇರಿಯಲ್ಲಿಯೇ ಇವರಿಬ್ಬರೂ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಐವರ ಪೈಕಿ ಈಗ ಬಂಧಿತ ಇಬ್ಬರೂ ಬಿಜೆಪಿಯವರು. ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಕಾರ್ತಿಕ್‌, ಪುಟ್ಟರಾಜು, ನವೀನ್‌ ಗೌಡ ಅವರನ್ನು ಬಂಧಿಸದೆ ಇಬ್ಬರು ಬಿಜೆಪಿ ಬೆಂಬಲಿಗರನ್ನು ಮಾತ್ರ ಬಂಧಿಸಿರುವುದೂ ರಾಜಕೀಯ ವಿವಾದಕ್ಕೆಡೆ ಮಾಡಿಕೊಡುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next