ಹಾಸನ: ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಶತಕದ ಗಡಿಗೆ ಬಂದು ನಿಂತಿವೆ. ಭಾನುವಾರ 14 ಹೊಸ ಪಾಸಿಟಿವ್ ಪ್ರಕರಣ ಗಳು ವರದಿಯಾಗಿದ್ದು, ಕೋವಿಡ್ 19 ಸೋಂಕಿ ತರ ಒಟ್ಟು ಸಂಖ್ಯೆ 98ಕ್ಕೆ ತಲುಪಿವೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇದುವರೆಗೂ ಹೊರ ರಾಜ್ಯದವ ರಿಂದ ಬಂದಿದ್ದವರಲ್ಲಿ ಮಾತ್ರ ಕೋವಿಡ್ 19 ಪಾಸಿಟಿವ್ ವರದಿಯಾಗುತ್ತಿದ್ದವು. ಆದರೆ ಭಾನುವಾರ ವರದಿಯಾದ 14 ಪ್ರಕರಣಗಳ ಪೈಕಿ 11 ಮಂದಿ ಮಹಾರಾಷ್ಟ್ರದಿಂದ ಬಂದ ಹಿನ್ನೆಲೆಯವರಾಗಿದ್ದರೆ. ಇನ್ನು ಮೂವರು ಬೆಂಗಳೂರು ಪ್ರಯಾಣದ ಹಿನ್ನೆಲೆಯವರು. ಹಾಸನ ನಗರದ ಇಬ್ಬರಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ ಎಂದು ಅವರು ಹೇಳಿದರು.
ಕೆಎಸ್‌ಆರ್‌ಪಿ ಪೇದೆ, ಮಹಿಳೆಗೆ ಸೋಂಕು: ಹಾಸನ ನಗರದ ನಿವಾಸಿ. ಕೆಎಸ್‌ಆರ್‌ಪಿ ಪೇದೆಯೊಬ್ಬರು ಬೆಂಗಳೂರಿಗೆ ಸರ್ಕಾರಿ ವಾಹನದಲ್ಲೇ ಕರ್ತವ್ಯ ನಿಮಿತ್ತ ಪ್ರಯಾಣ ಮಾಡಿ ಬಂದಿದ್ದು, ಅವರಲ್ಲಿ ಕೋವಿಡ್ 19 ಸೋಂಕು ಕಂಡುಬಂದಿದೆ. ನಗರದ ಮತ್ತೂಬ್ಬ ಸೋಂಕಿತ ಮಹಿಳೆ ಕೂಡ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇನ್ನೊಬ್ಬರು ಮಂಗಳೂರು ಮೂಲದ ಬೆಂಗಳೂರಿನ ಕಾರ್ಮಿಕ ಲಾಕ್‌ಡೌನ್ ವೇಳೆ ಹಾಸನಕ್ಕೆ ಅಗಮಿಸಿದ ತಕ್ಷಣ ಹಾಸನದ ಕೋವಿಡ್ 19 ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದರು. ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ 12 ನೇ ದಿನದ ಎರಡನೇ ತಪಾಸಣೆಯಲ್ಲಿ ಆತನಲ್ಲಿ ಕೊರೋನಾ ಸೋಂಕು ಧೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಹೊಸದಾಗಿ ಭಾನುವಾರ ವರದಿಯಾಗಿರುವ 14 ಪ್ರಕರಣಗಳಲ್ಲಿ 11 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಅವರಲ್ಲಿ ಹಾಸನ ತಾಲೂಕು ಮೂಲದವರು 6 ಮಂದಿ ಹಾಗೂ 8 ಮಂದಿ ಚನ್ನರಾಯ ಪಟ್ಟಣ ತಾಲೂಕಿಗೆ ಸೇರಿದವರು ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದರು. ಹಾಸನ ಉಪ ವಿಭಾಗಾಧಿಕಾರಿ ಡಾ.ನವೀನ್‌ಭಟ್, ಡಿಎಚ್‌ಒ ಡಾ.ಕೆ.ಎಂ.ಸತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.