Advertisement

ಹಾಸನ: ಲಾಕ್‌ಡೌನ್‌ ಬಹುತೇಕ ಯಶಸ್ವಿ

06:32 AM Jul 06, 2020 | Lakshmi GovindaRaj |

ಹಾಸನ: ಕೋವಿಡ್‌ 19 ನಿಯಂತ್ರಣಕ್ಕೆ ಪ್ರತಿ ಭಾನುವಾರ ಲಾಕ್‌ಡೌನ್‌ ಘೋಷಿಸಿರುವ ಸರ್ಕಾರದ ಕ್ರಮಕ್ಕೆ ಹಾಸನ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಾಸನ ನಗರದಲ್ಲಿ ಭಾನುವಾರ ಲಾಕ್‌ಡೌನ್‌ ಯಶಸ್ವಿಯಾಯಿತು.  ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳು ದಿನೇ, ದಿನೆ ಹೆಚ್ಚುತ್ತಿರುವುದರಿಂದ ಹಾಸನ ನಗರದ ಪ್ರಮುಖ ಭಾಗದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌  ಬೆಂಬಲಿಸಿದರು.  ಬಡಾವಣೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಗ್ರಾಹಕರು ಅಂಗಡಿಗಳತ್ತ ಕಾಣಿಸಿಕೊಳ್ಳಲಿಲ್ಲ. ಜನ, ವಾಹನ ಸಂಚಾರವೂ ಕ್ಷೀಣಿಸಿತ್ತು. ಕೆಲವು ಕಡೆ ಪೊಲೀಸರು ಅಂಗಡಿ ತೆರೆದಿದ್ದವರಿಗೆ ಬಿಸಿ ಮುಟ್ಟಿಸಿದರು.

Advertisement

ಬಸ್‌ ಸಂಚಾರ ಸ್ಥಗಿತ: ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಈ ಮೊದಲೇ ಕೆಎಸ್‌ ಆರ್‌ಟಿಸಿ ಘೋಷಿಸಿದ್ದರಿಂದ ಬಸ್‌ಗಳ ಸಂಚಾರ ಇರಲಿಲ್ಲ. ಹಣ್ಣು, ತರಕಾರಿ, ಔಷಧಿ ಅಂಗಡಿಗಳು ತೆರೆದಿದ್ದವು ಗ್ರಾಮೀಣ ಪ್ರದೇಶಗಳಿಂದ ತಮ್ಮ  ಸ್ವಂತ ವಾಹನಗಳಲ್ಲಿ ಬಂದಿದ್ದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅಡ್ಡಿಯಾಗಲಿಲ್ಲ. ಬಡಾವಣೆಗಳಲ್ಲಿನ ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಕದ್ದು-ಮುಚ್ಚಿ ವ್ಯಾಪಾರ ನಡೆಯಿತಾದರೂ ಮಧ್ಯಾಹ್ನದ ವೇಳೆಗೆ  ಮಾಂಸದಂಗಡಿಗಳೂ ಮುಚ್ಚಿದವು.

ಹೊರ ಬಾರದ ಜನ: ಭಾನುವಾರ ಮುಂಜಾನೆಯಿಂದಲೇ ತುಂತುರು ಮಳೆ ಆರಂಭವಾಗಿದ್ದರಿಂದ ಜನರೂ ಮನೆಯಿಂದ ಹೊರ ಬಾರದಿದ್ದರಿಂದ ಲಾಕ್‌ಡೌನ್‌ ಯಶಸ್ವಿಗೆ ಸಹಾಕರಿಯಾಯಿತು. ಮಧ್ಯಾಹ್ನದ ನಂತರ ವಾಹನಗಳ ಸಂಚಾರ  ಆರಂಭವಾದರೂ ಆತಂಕದಲ್ಲಿಯೇ ವಾಹನಗಳ ಚಾಲಕರು ರಸ್ತೆಗಳಲ್ಲಿ ಸಂಚರಿಸಿದರು. ಮುಂದಿನ ಮೂರು ಭಾನುವಾರಗಳು ಲಾಕ್‌ಡೌನ್‌ ಜಾರಿಯಾಗುವುದೆಂದು ಸರ್ಕಾರ ಘೋಷಣೆ ಮಾಡಿರುವುದರಿಂದ ಮೊದಲ ಭಾನುವಾರವೇ  ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರು ವುದರಿಂದ ಜನರು ಲಾಕ್‌ಡೌನ್‌ಗೆ ಸ್ಪಂದಿಸುವ ಸೂಚನೆ ಸಿಕ್ಕಿದಂತಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಗಳಲ್ಲೂ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next