ಎನ್. ನಂಜುಂಡೇಗೌಡ
ಹಾಸನ: ಅರಸೀಕೆರೆ ತಾಲೂಕಿನ ಹಿರೇಕಲ್ಲುಗುಡ್ಡ ಮೀಸಲು ಅರಣ್ಯ (ನಾಗಪುರಿ ಅರಣ್ಯ) ರಾಜ್ಯದ 3ನೇ ಕರಡಿಧಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಳ್ಳಾರಿ ಜಿಲ್ಲೆಯ ದರೋಜಿ ಮತ್ತು ಗುಡೆಕೋಟೆ ಕರಡಿಧಾಮಗಳ ನಂತರ ಹಿರೇಕಲ್ಲುಗುಡ್ಡ ಕರಡಿಧಾಮ ರಾಜ್ಯದ 3ನೇ ಕರಡಿಧಾಮ ಎಂದು ಘೋಷಣೆಯಾಗಿದೆ.
ಹಿರೇಕಲ್ಲುಗುಡ್ಡ ಅರಣ್ಯವನ್ನು ಕರಡಿಧಾಮವಾಗಿ ಘೋಷಿಸಬೇಕೆಂಬ ಬಹಳ ಕಾಲದ ಬೇಡಿಕೆಯನ್ನು ರಾಜ್ಯ ಸರ್ಕಾರ ಕೊನೆಗೂ ಈಡೇರಿಸಿದೆ. ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯು ಹಿರೇಕಲ್ಲುಗುಡ್ಡ
ಮೀಸಲು ಅರಣ್ಯವನ್ನು ಕರಡಿಧಾಮವಾಗಿ ಘೋಷಿಸಲು ಅನುಮೋದನೆ ನೀಡಿದೆ.
ಅಧಿಸೂಚನೆ ಬಳಿಕ ಕ್ರಿಯಾಯೋಜನೆ: ಅರಸೀಕೆರೆ ತಾಲೂಕಿನ ಹಿರೇಗುಡ್ಡ (ನಾಗಪುರಿ), ರಾಮೇನಹಳ್ಳಿ, ಚಾಕನಕಟ್ಟೆ, ಗರುಡನಗಿರಿ ಮೀಸಲು ಅರಣ್ಯವನ್ನೊಳಗೊಂಡ 10,088ಹೆಕ್ಟೇರ್ ಪ್ರದೇಶವನ್ನು ಕರಡಿಧಾಮವನ್ನಾಗಿ ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ಸಭೆ ಅನುಮೋದನೆ ನೀಡಿದ್ದು, ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾದ ನಂತರ ಅರಣ್ಯ ಇಲಾಖೆ ಕರಡಿಧಾಮದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಿದೆ.
ಪ್ರಸ್ತಾವನೆ ಸಲ್ಲಿಸಲಾಗಿತ್ತು: 2016 -17ನೇ ಸಾಲಿನಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ವಲಯದ ನೇತೃತ್ವದಲ್ಲಿ ಸಂಸ್ಥೆಯೊಂದು ಅರಸೀಕೆರೆ ತಾಲೂಕಿನ ಹಿರೆಕಲ್ಲುಗುಡ್ಡ ಅರಣ್ಯದಲ್ಲಿ ಗಣತಿ ನಡೆಸಿದಾಗ ಅಲ್ಲಿ 30ಕ್ಕೂ ಹೆಚ್ಚು ಕರಡಿ, 100 ಕ್ಕೂ ಹೆಚ್ಚು ಚಿರತೆಗಳಿವೆ ಎಂಬುದನ್ನು ದೃಢಪಡಿಸಿತ್ತು. ಆನಂತರ ಆ ಪ್ರದೇಶವನ್ನು ಕರಡಿಧಾಮವೆಂದು ಘೋಷಿಸಿ ಅಭಿವೃದ್ಧಿಪಡಿಸ
ಬೇಕೆಂದು ಅರಣ್ಯ ಇಲಾಖೆ ಹಾಸನ ವಿಭಾಗ ಪ್ರಸ್ತಾವನೆ ಸಲ್ಲಿಸಿತ್ತು. ಆ ಪ್ರಸ್ತಾವನೆಗೆ ಈಗ ಸರ್ಕಾರ ಅನುಮೋದನೆ ನೀಡಿದೆ.
45ಕ್ಕೂ ಹೆಚ್ಚು ಕರಡಿಗಳಿವೆ: 2016 -17ನೇ ಸಾಲಿನಲ್ಲಿ ಸುಮಾರು 30 ಕರಡಿಗಳಿವೆ ಎಂಬುದು ಗಣತಿಯಿಂದ ದೃಢಪಟ್ಟಿತ್ತು. ಕಳೆದ 3 ವರ್ಷಗಳಲ್ಲಿ ಕರಡಿಗಳ ಸಂಖ್ಯೆ ವೃದ್ಧಿಸಿದೆ. ಈಗ 45 ಕ್ಕೂ ಹೆಚ್ಚು ಕರಡಿಗಳಿವೆ ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ. ಕರಡಿಗಳ ಜೊತೆಗೆ ಅಲ್ಲಿ ಕಡವೆ, ಕೃಷ್ಣಮೃಗ, ಕಾಡುಬೆಕ್ಕು, ತೋಳಗಳೂ ಬಹಳಷ್ಟು ಇವೆ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.