ಹಾಸನ: ನಗರದ ವೈದ್ಯಕೀಯ ಕಾಲೇಜು (ಹಿಮ್ಸ್) ಆಸ್ಪತ್ರೆಯಲ್ಲಿ ಭಾನುವಾರ ಒಂದೇ ದಿನ ಮೂರು ನವಜಾತ ಶಿಶುಗಳು ಸಾವನ್ನಪ್ಪಿವೆ.
ಚಿಕ್ಕಮಗಳೂರು ಜಿಲ್ಲೆ ಮೂಲದ ಜಗದೀಶ್ – ಪುಷ್ಪಾ, ಬೇಲೂರು ತಾಲೂಕಿನ ದೇವರಾಜು – ಗೀತಾ ಹಾಗೂ ಮತ್ತೂಬ್ಬ ದಂಪತಿಯ ಶಿಶುಗಳು ಜನಿಸಿದ ದಿನವೇ ಮೃತಪಟ್ಟಿವೆ.
ಇದಕ್ಕೆ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಯ ಹೆರಿಗೆ ವಾರ್ಡ್‌ಗಳಲ್ಲಿ ಶುಚಿತ್ವದ ಕೊರತೆಯೇ ಕಾರಣ ಎಂಬುದು ಶಿಶುಗಳನ್ನು ಕಳೆದುಕೊಂಡವರ ಆರೋಪವಾಗಿದೆ.
ವಾರ್ಡ್‌ಗಳಲ್ಲಿ ಬಾಣಂತಿ, ಶಿಶುಗಳ ಸಮಸ್ಯೆಯನ್ನು ಕೇಳುವವರಿಲ್ಲ. ಪ್ರಶ್ನೆ ಮಾಡಿದರೆ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿ ಎಂದು ವೈದ್ಯ ಸಿಬ್ಬಂದಿ ಗದರಿಸುತ್ತಾರೆ. ಹಿರಿಯ ವೈದ್ಯರು ಹೆರಿಗೆ ವಾರ್ಡ್‌ಗಳತ್ತ ಬರುವುದೇ ಇಲ್ಲ. ಕಿರಿಯ ವೈದ್ಯರು ಹಾಗೂ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಾತನಾಡಿ, ಚಿಕ್ಕಮಗಳೂರು ಹಾಗೂ ಬೇಲೂರು ಮೂಲದ ಎರಡು ಶಿಶುಗಳು ಸಾವನ್ನಪ್ಪಿವೆ ಎಂಬ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಅವಧಿಗೂ ಮುನ್ನ ಜನಿಸಿದ ಹಾಗೂ ಇತರೆ ಕಾರಣಗಳಿಂದ ಶಿಶುಗಳು ಸಾವನ್ನಪ್ಪಿರಬಹುದು. ಆಸ್ಪತ್ರೆಯಲ್ಲಿ ಸರಾಸರಿ ಪ್ರತಿನಿತ್ಯ 20 ಸಹಜ ಹೆರಿಗೆ, 10 ಸಿಜೇರಿಯನ್‌ಗಳಾಗುತ್ತಿವೆ. ಹೊರ ಜಿಲ್ಲೆಗಳಿಂದಲೂ ಆಸ್ಪತ್ರೆಗೆ ರೋಗಿಗಳು ಬಂದು ಚಿಕಿತ್ಸೆಗೆ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಗಂಭೀರ ಲೋಪಗಳಾಗುತ್ತಿಲ್ಲ ಎಂದು ಹೇಳಿದರು.