ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಮೂರು ವರ್ಷದ ಮಗು ಸೇರಿ 18 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಸೋಂಕಿತರ ಒಟ್ಟು ಸಂಖ್ಯೆ 271ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಡೀಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಕೆಮ್ಮು, ಶ್ವಾಸಕೋಶದ ತೊಂದರೆಗೆ ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಚನ್ನರಾಯ ಪಟ್ಟಣದ ಗ್ರಾಮವೊಂದರ 60 ವರ್ಷದ ವೃದ್ಧರೊಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಆ ರೋಗಿಗೆ ಚಿಕಿತ್ಸೆ ನೀಡಿದ್ದ ನಾಲ್ವರು ವೈದ್ಯರು ಸೇರಿ 17 ಮಂದಿ ಸಂಪರ್ಕಿತರಿಗೆ ಕ್ವಾರಂಟೈನ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ವೃದ್ಧನ ಗ್ರಾಮವನ್ನೂ ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಚಿಕಿತ್ಸೆ ನೀಡಿದ ವೈದ್ಯ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ವರದಿ ಬಂದ ನಂತರ ಕ್ವಾರಂಟೈ ನ್‌ಗೆ ಒಳಪಡಿಸುವ ಅಗತ್ಯವಿದೆಯೇ ಎಂಬ ಬಗ್ಗೆ ನಿರ್ಧರಿಸಲಾಗುವುದು. ವೃದ್ಧನಿಗೆ ಚಿಕಿತ್ಸೆ ನೀಡುತ್ತಿದ್ದ ವಾರ್ಡ್‌ನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಒಂದೇ ಕುಟುಂಬದ ಮೂವರಿಗೆ ಸೋಂಕು: ಹೊಸದಾಗಿ ಸೋಂಕು ದೃಢಪಟ್ಟಿರುವ 18 ಜನರ ಪೈಕಿ ನಾಲ್ವರು ಹಾಸನ ತಾಲೂಕಿನವರಾಗಿ ದ್ದು, ಅವರಲ್ಲಿ ಮೂವರು ಒಂದೇ ಕುಟುಂಬ ದವರು. ಪತಿ, ಪತ್ನಿ ಮತ್ತು ಮೂರು ವರ್ಷದ ಮಗು ಬುಧವಾರ ಮುಂಬೈನಿಂದ ಬಂದಿದ್ದುಕ್ವಾರಂಟೈನಲ್ಲಿದ್ದರು. ಮತ್ತೂಬ್ಬರು ಅದೇ ತಂಡದಲ್ಲಿ ಬಂದಿದ್ದವರಿಗೂ ಕೋವಿಡ್ 19 ದೃಢಪಟ್ಟಿದೆ ಎಂದು ಡೀಸಿ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ 14 ಜನರಿಗೆ ಕೋವಿಡ್ 19 ದೃಢಪಟ್ಟಿದೆ. ಆ ಪೈಕಿ 13 ಜನರು ಮುಂಬೈನಿಂದ 2 -3 ತಂಡಗಳಲ್ಲಿ ಬಂದಿದ್ದು, ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದರು. ಇನ್ನು 60 ವರ್ಷದ ವೃದ್ಧನಿಗೆ ಮುಂಬೈನವರ ಸಂಪರ್ಕವಿರಲಿಲ್ಲ. ಕೋವಿಡ್ 19 ಸೋಂಕಿತರ ಸಂಪರ್ಕದಲ್ಲಿಯೂ ಇರಲಿಲ್ಲ. ಆದರೆ ಅವರು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಹಾಗಾಗಿ ಅವರ ಹಿನ್ನಲೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
192 ಮಂದಿ ಗುಣಮುಖ: ಜಿಲ್ಲೆಯಲ್ಲಿ ಈ ವರೆಗೆ 192 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 78 ಮಂದಿ ಸಕ್ರಿಯ ಸೋಂಕಿತರು ಹಾಸನದ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ, ಡಿಎಚ್‌ಒ ಡಾ.ಸತೀಶ್‌ಕುಮಾರ್, ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.