ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸಂಬಂಧ ಬೆಂಗಳೂರಿನಲ್ಲಿ ರವಿವಾರ ನಿರ್ಣಾಯಕ ಸಭೆ ನಿಗದಿಯಾಗಿದೆ.
ಇದರ ನಡುವೆಯೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿರುವ ಭವಾನಿ ರೇವಣ್ಣ ಮತ್ತು ಎಚ್.ಪಿ. ಸ್ವರೂಪ್ ಶನಿವಾರವೂ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲು ಪೈಪೋಟಿ ಗಿಳಿದಿರುವ ಮಾಜಿ ಶಾಸಕ ದಿ| ಎಚ್.ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್ ಕ್ಷೇತ್ರದ ವಿವಿಧೆಡೆ ಎರಡು ವಾರಗಳಿಂದ ಪ್ರವಾಸ ನಡೆಸಿ ಜೆಡಿಎಸ್‌ನಿಂದ ಯಾರೇ ಸ್ಪರ್ಧೆಗಿಳಿದರೂ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಇದರ ನಡುವೆಯೇ ಕಳೆದೆರಡು ದಿನಗಳಿಂದ ಭವಾನಿ ರೇವಣ್ಣ ಅವರೂ ಕ್ಷೇತ್ರದ ವಿವಿಧ ಗ್ರಾ.ಪಂ.ಗಳಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದು, ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಬಿ.ವಿ. ಕರೀಗೌಡ ಮತ್ತಿತರ ಮುಖಂಡರು ಪಾಲ್ಗೊಂಡು ಭವಾನಿ ಜತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಹಾಸನ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.
ಟ್ವೆಂಟಿ-ಟ್ವೆಂಟಿ ಮ್ಯಾಚ್ ಇದ್ದಂತೆ
ಹಾಸನ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾ ಗಬೇಕು ಎಂದು ಕಾರ್ಯಕರ್ತರು ಹೇ ಳುತ್ತಾರೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಮಾಧ್ಯಮಗಳೂ ಸೇರಿ ಎಲ್ಲರಿಗೂ ನಮ್ಮ ಕುಟುಂಬದ ಬಗ್ಗೆ ಕುತೂಹಲವಿದೆ. ಆದರೆ ಜೆಡಿಎಸ್‌ಗೆ ಕಾರ್ಯಕರ್ತರೇ ಕುಟುಂಬ. ಇದೊಂದು ರೀತಿ ಟ್ವೆಂಟಿ-ಟ್ವೆಂಟಿ ಮ್ಯಾಚ್ ಇದ್ದಂತೆ. ಟಿಕೆಟ್ ಯಾರಿಗೆ ಘೋಷಣೆಯಾಗುತ್ತದೆ ಎಂದು ಕೊನೆಯವರೆಗೂ ಎಲ್ಲರಿಗೂ ಕುತೂಹಲವಿರಲಿ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಜೆಡಿಎಸ್‌ಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.