Advertisement

ಗೌಡರ ಕುಟುಂಬವನ್ನೇ ಕಂಗೆಡಿಸಿದ ಹಾಸನ ಕ್ಷೇತ್ರ

10:15 PM Feb 26, 2023 | Team Udayavani |

ಹಾಸನ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಲು ಸಿದ್ಧರಿಲ್ಲ. ಎಚ್‌.ಡಿ.ರೇವಣ್ಣ ಮತ್ತು ಕುಟುಂಬದವರೂ ಎಚ್‌.ಪಿ.ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದನ್ನು ಸಹಿಸಿಕೊಳ್ಳುವ ಸ್ಥಿತಿಯಿಲ್ಲ. ಈಗ ಬಾಲ್‌ ದೇವೇಗೌಡರ ಕೋರ್ಟಿ ನಲ್ಲಿದೆ.

Advertisement

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಎಚ್‌.ಪಿ.ಸ್ವರೂಪ್‌ ನಡುವೆ ನಡೆಯುತ್ತಿರುವ ಪೈಪೋಟಿ ಈಗ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರಾಮ- ಲಕ್ಷ್ಮಣರಂತಿದ್ದ ಎಚ್‌.ಡಿ.ರೇವಣ್ಣ – ಎಚ್‌.ಡಿ.ಕುಮಾರಸ್ವಾಮಿ ಅವರ ಸಹೋದರ ಸಂಬಂಧಕ್ಕೆ ಧಕ್ಕೆ ತರುವ ಮಟ್ಟಕ್ಕೆ ಈ ಬಾರಿ ಟಿಕೆಟ್‌ ಪೈಪೋಟಿ ನಿರ್ಮಾಣವಾಗಿದೆ.

ಈ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ನಡೆಯುತ್ತಿರುವ ಪೈಪೋಟಿ ಹೊಸದೇನೂ ಅಲ್ಲ. ಈ ಹಿಂದಿನ ಚುನಾವಣೆಗಳಲ್ಲೂ ಬಿ.ವಿ.ಕರೀಗೌಡ, ಎಚ್‌.ಎಸ್‌.ಪ್ರಕಾಶ್‌, ಪಟೇಲ್‌ ಶಿವರಾಂ, ಕೆ.ಎಂ.ರಾಜೇಗೌಡರ ನಡುವೆ ಪೈಪೋಟಿ ನಡೆಯುತ್ತಿತ್ತು. ನಾಮಪತ್ರ ಸಲ್ಲಿಸುವ ಕಡೆ ಗಳಿಗೆಯವರೆಗೂ ಟಿಕೆಟ್‌ ಗೊಂದಲ ಮುಂದುವರಿದು, ಅಂತಿಮವಾಗಿ ದೇವೇಗೌಡರೇ ತೀರ್ಮಾನ ತೆಗೆದುಕೊಂಡು ವಿವಾದ ಬಗೆಹರಿಸುತ್ತಿದ್ದರು. ಹಾಗಾಗಿ ಈ ಹಿಂದಿನ ಚುನಾವಣೆಗಳಲ್ಲಿ ಈ ಕ್ಷೇತ್ರದ ಟಿಕೆಟ್‌ಗಾಗಿ ನಡೆಯುತ್ತಿದ್ದ ಪೈಪೋಟಿ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ . ಈ ಬಾರಿ ದೇವೇಗೌಡರ ಕುಟುಂಬದವರೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲು ಮುಂದಾಗಿದ್ದರಿಂದ ಟಿಕೆಟ್‌ನ ಪೈಪೋಟಿ ರಾಜ್ಯದ ಗಮನ ಸೆಳೆದಿದೆ.

ಈಗ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಎಚ್‌.ಪಿ. ಸ್ವರೂಪ್‌ ಅವರ ತಂದೆ ಎಚ್‌.ಪ್ರಕಾಶ್‌ ಅವರು ಜನತಾದಳ, ಜೆಡಿಎಸ್‌ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ 6 ಬಾರಿ ಸ್ಪರ್ಧೆಗಿಳಿದು 4 ಬಾರಿ ಗೆಲುವು ಕಂಡಿದ್ದವರು. ದೇವೇಗೌಡರ ಕಟ್ಟಾ ಅಭಿಮಾನಿಯಾಗಿದ್ದ ಪ್ರಕಾಶ್‌ ಅವರಿಗೆ ಟಿಕೆಟ್‌ ತಪ್ಪಿಸಲು 3 ಬಾರಿ ಪ್ರಯತ್ನ ನಡೆದಿತ್ತು. ಆದರೂ ದೇವೇಗೌಡರ ಕೃಪೆಯಿಂದ ಪ್ರಕಾಶ್‌ ಅವರಿಗೆ ನಿರಂತರವಾಗಿ 6 ಬಾರಿ ಟಿಕೆಟ್‌ ಸಿಕ್ಕಿತ್ತು. ಕಳೆದ ಚುನಾವಣೆಯಲ್ಲಿ ಸೋತ ಒಂದು ವರ್ಷದಲ್ಲಿಯೇ ಪ್ರಕಾಶ್‌ ಅವರು ನಿಧನರಾದಾಗ ಎಚ್‌.ಡಿ.ಕುಮಾರಸ್ವಾಮಿ ಅವರು ನಿಮ್ಮ ಕೈ ಬಿಡುವುದಿಲ್ಲ ಎಂದು ಪ್ರಕಾಶ್‌ ಕುಟುಂಬಕ್ಕೆ ಭರವಸೆ ನೀಡಿದ್ದರು. ಅದರಂತೆ ಈಗ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವ ಬದ್ಧತೆ ತೋರುತ್ತಲೇ ಬಂದಿದ್ದಾರೆ. ಎಚ್‌.ಡಿ.ರೇವಣ್ಣ ಅವರೂ ಸ್ವರೂಪ್‌ ಅವರನ್ನು ಆಪ್ತತೆಯಿಂದಲೇ ನೋಡಿಕೊಂಡು ರಾಜಕೀಯ ಅವಕಾಶಗಳನ್ನು ನೀಡುತ್ತಲೇ ಬಂದಿದ್ದರು. ಆದರೆ ಕಳೆದ 6 ತಿಂಗಳುಗಳಿಂದೀಚೆಗೆ ನಡೆದ ಬೆಳವಣಿಗೆಗಳು ರೇವಣ್ಣ ಮತ್ತು ಕುಟುಂಬದವರು ಸ್ವರೂಪ್‌ ಅವರ ವಿರೋಧಿಗಳಾಗುವ ಪರಿಸ್ಥಿತಿ ಸೃಷ್ಟಿಸಿದವು.

ಪ್ರಕಾಶ್‌ ಅವರು ನಿಧನ ಹೊಂದಿದ ಸಂದರ್ಭದಲ್ಲಿ ಸ್ವರೂಪ್‌ ಅವರು ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದರು. ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಷ್ಟು ರಾಜಕೀಯ ಸಾಮರ್ಥಯ ರೂಢಿಸಿಕೊಳ್ಳುವರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹಾಗಾಗಿಯೇ ಕಳೆದ ಮೂರು ವರ್ಷಗಳಿಂದಲೂ ಮುಂದಿನ ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅಥವಾ ಅವರ ಮಗ ಡಾ| ಸೂರಜ್‌ ರೇವಣ್ಣ ಬರಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಲೇ ಇದ್ದವು. ರೇವಣ್ಣ ಕುಟುಂಬದವರೂ ಹಾಸನ ಕ್ಷೇತ್ರಕ್ಕೆ ಬರಲು ಮಾನಸಿಕವಾಗಿ ಸಿದ್ದರಾಗುತ್ತಲೇ ಬಂದರು. ಆದರೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಪ್ರಕಾಶ್‌ ಅವರ ಕುಟುಂಬದವರ ಅನಿವಾರ್ಯತೆಯಿತ್ತು. ಹಾಗಾಗಿ ಸ್ವರೂಪ್‌ ಅವರಿಗೆ ಹಾಸನ ಜಿ. ಪಂ. ಉಪಾಧ್ಯಕ್ಷ ಸ್ಥಾನ, ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿದ್ದೂ ರೇವಣ್ಣ ಅವರೇ.

Advertisement

ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂಬ ಸುಳಿವು ಪಡೆದ ಅನಂತರ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ವರೂಪ್‌ ಅವರಿಗೆ ಚುನಾವಣೆಗೆ ಸಜ್ಜಾಗುವ ಪರೋಕ್ಷ ಸೂಚನೆ ನೀಡಿದ್ದರೆಂದು ಸ್ವರೂಪ್‌ ಅವರೂ ತಮ್ಮ ಬೆಂಬಲಿಗರ ತಂಡ ಕಟ್ಟಿಕೊಂಡು ಕ್ಷೇತ್ರ ಸಂಚಾರ ಮಾಡತೊಡಗಿದರು. ಆಗಿನಿಂದಲೇ ರೇವಣ್ಣ ಮತ್ತು ಕುಟುಂಬದವರು ಸ್ವರೂಪ್‌ ಅವರನ್ನು ದೂರವಿರಿಸುತ್ತಾ ಬಂದರು.

6 ತಿಂಗಳ ಹಿಂದೆ ಹಾಸನದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್‌ ಬೆಂಬಲಿಗರು ಸೃಷ್ಟಿಸಿದ ರಂಪಾಟ, ರೇವಣ್ಣ, ಭವಾನಿ ಅವರಿದ್ದ ಫ್ಲೆಕ್ಸ್‌ ಹರಿದು ಘೋಷಣೆ ಕೂಗಿದ್ದನ್ನು ಕಂಡು ರೇವಣ್ಣ ಅವರು ಕೆರಳಿ ಕೆಂಡವಾಗಿದ್ದ‌ರು. ಅನಂತರ ಎಚ್‌. ಪ್ರಕಾಶ್‌ ಅವರ ಹುಟ್ಟುಹಬ್ಬದ ನೆಪದಲ್ಲಿ ನಡೆದ ಬೃಹತ್‌ ಸಭೆಗೆ ರೇವಣ್ಣ ಮತ್ತು ಕುಟುಂಬದವರು ಗೈರುಹಾಜರಾದರೂ ಎಚ್‌.ಡಿ.ಕುಮಾರಸ್ವಾಮಿ ಅವರು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಬಂದು ಸ್ವರೂಪ್‌ ಅವರೇ ಮುಂದಿನ ಅಭ್ಯರ್ಥಿ ಎಂಬ ಸುಳಿವು ನೀಡಿ ಹೋದರು. ಆಂದಿನಿಂದ ಸ್ವರೂಪ್‌ ನಮ್ಮ ಹಿಡಿತಕ್ಕೆ ಸಿಗುವುದಿಲ್ಲ ಎಂದರಿತ ರೇವಣ್ಣ ಮತ್ತು ಕುಟುಂಬದವರು ಈಗಾಗಲೇ ಆ ಕುಟುಂಬಕ್ಕೆ 4 ಬಾರಿ ಶಾಸಕ ಸ್ಥಾನ, ಹಾಸನ ನಗರಸಭೆ ಅಧ್ಯಕ್ಷ ಸ್ಥಾನ, ಜಿ.ಪಂ. ಉಪಾಧ್ಯಕ್ಷ ಸ್ಥಾನ ಕೊಟ್ಟಾಗಿದೆ. ಇನ್ನು ಸ್ವರೂಪ್‌ ಮತ್ತು ಕುಟುಂಬಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂಬ ಹಂತಕ್ಕೆ ಬಂದಿದ್ದಾರೆ. ಹಾಗಾಗಿ ಕಳೆದ ಮೂರು ತಿಂಗಳುಗಳಿಂದ ಸ್ವರೂಪ್‌ ಮತ್ತು ರೇವಣ್ಣ ಕುಟುಂಬದ ನಡುವೆ ಸಂಪರ್ಕವೇ ಕಡಿದು ಹೋಗಿದೆ.

ದೇವೇಗೌಡರ ಕುಟುಂಬದಲ್ಲಿನ ಆಂತರಿಕ ಬೆಳವಣಿಗೆಗಳ ಪರಿಣಾಮ ಎಚ್‌.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಲು ಸಿದ್ಧರಿಲ್ಲ. ಎಚ್‌.ಡಿ.ರೇವಣ್ಣ ಮತ್ತು ಕುಟುಂಬದವರೂ ಎಚ್‌.ಪಿ.ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದನ್ನು ಸಹಿಸಿಕೊಳ್ಳುವ ಸ್ಥಿತಿಯಿಲ್ಲ. ಸ್ವರೂಪ್‌ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ಕೊಟ್ಟರೂ ಸ್ವರೂಪ್‌ಗೆ ಟಿಕೆಟ್‌ ಕೊಡುವ ಅಥವಾ ಅವರ ಪರ ನಿಲ್ಲುವ ಪರಿಸ್ಥಿತಿಯಲ್ಲಿ ರೇವಣ್ಣ ಕುಟುಂಬದವರಿಲ್ಲ. ಇದೀಗ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಷಯ ದೇವೇಗೌಡರ ಕುಟುಂಬದಲ್ಲಿಯೇ ಒಡಕು ಮೂಡಿಸುವ ಹಂತಕ್ಕೆ ಹೋಗಿದೆ. ಇದೀಗ ದೇವೇಗೌಡರೇ ಮಧ್ಯ ಪ್ರವೇಶಿಸಿ ಎಚ್‌ಡಿಕೆ ಮತ್ತು ರೇವಣ್ಣನವರನ್ನು ಸಮಾಧಾನಪಡಿಸುವ ಅಥವಾ ಭವಾನಿ ಮತ್ತು ಸ್ವರೂಪ್‌ ಹೊರತಾದ ಅಭ್ಯರ್ಥಿ ಆಯ್ಕೆ ಮಾಡಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲಿಸುವ ಸೂತ್ರ ಹುಡುಕುವ ಅನಿವಾರ್ಯತೆ ಎದುರಾಗಿದೆ.

-ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next