ಅಟ್ಕೋಟ್ (ಗುಜರಾತ್): ಕಳೆದ ಎಂಟು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಈ ಎಂಟು ವರ್ಷಗಳಲ್ಲಿ ಜನರು ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಗುಜರಾತ್ ಪ್ರವಾಸದಲ್ಲಿರುವ ಅವರು ರಾಜಕೋಟ್ ನ ಮಾತೋಶ್ರಿ ಕೆಡಿಪಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಬಳಿಕ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಕಳೆದ ಎಂಟು ವರ್ಷಗಳಿಂದ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ಅವರ ಕನಸಿನಂತೆ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಬಡವರು, ದಲಿತರು, ಆದಿವಾಸಿಗಳು, ಮಹಿಳೆಯರನ್ನು ಸಬಲೀಕರಣಗೊಳಿಸುವ ಭಾರತವನ್ನು ಬಾಪು ಬಯಸಿದ್ದರು. ನೈರ್ಮಲ್ಯ ಮತ್ತು ಆರೋಗ್ಯವು ಜೀವನದ ಮಾರ್ಗವಾಗಿದೆ” ಎಂದು ಮೋದಿ ಹೇಳಿದರು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಸಮಸ್ಯೆ ತಲೆದೋರಿದಾಗ ಬಡವರು ಆಹಾರದ ಸಮಸ್ಯೆ ಎದುರಿಸಿದರು. ಈ ಜನರಿಗಾಗಿ ನಾವು ಆಹಾರ ಧಾನ್ಯ ಕೇಂದ್ರಗಳನ್ನು ಆರಂಭಿಸಿದೆವು. ಮಹಿಳೆಯರ ಘನತೆಗಾಗಿ ನಾವು ಜನ್ ಧನ್ ಖಾತೆಯನ್ನು ಆರಂಭಿಸಿದೆವು. ರೈತರ ಖಾತೆಗೆ ನೇರ ಹಣ ಹಾಕಿದೆವು ಎಂದರು.
ಇದನ್ನೂ ಓದಿ:ಭಯೋತ್ಪಾದನೆ ಸಮರ್ಥಿಸಿಕೊಳ್ಳಬೇಡಿ:ಮಲಿಕ್ ಶಿಕ್ಷೆ ತೀರ್ಪು ಟೀಕಿಸಿದ IOCಗೆ ಭಾರತ ತಿರುಗೇಟು
ಅಷ್ಟೇ ಅಲ್ಲದೆ ನಾವು ಬಡವರ ಅಡುಗೆ ಮನೆಗೆ ಉಚಿತ ಗ್ಯಾಸ್ ಸಿಗುವಂತೆ ಮಾಡಿದೆವು. ವೈದ್ಯಕೀಯ ಚಿಕಿತ್ಸೆಯ ಸವಾಲುಗಳು ಹೆಚ್ಚಾದಾಗ ನಾವು ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಸರಳೀಕರಣಗೊಳಿಸಿದೆವು. ಕೋವಿಡ್ ಲಸಿಕೆ ಬಂದಾಗ ಎಲ್ಲಾ ಜನರಿಗೆ ಲಸಿಕೆಯನ್ನು ಉಚಿತವಾಗಿ ಸಿಗುವಂತೆ ಮಾಡಿದೆವು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.