ಹುಬ್ಬಳ್ಳಿ: ಹಜ್ ಯಾತ್ರೆಗೆಂದು ಸುಮಾರು 58 ಯಾತ್ರಾರ್ಥಿಗಳಿಂದ ಅಂದಾಜು 1.5 ಕೋಟಿ ರೂ. ಸಂಗ್ರಹಿಸಿ ಕಣ್ಮರೆಯಾಗಿರುವ ಇಲ್ಲಿನ ಕಾರವಾರ ರಸ್ತೆಯ ಹಬೀಬಾ ಹರಮೇನ್ ಟ್ರಾವೆಲ್ಸ್ ಏಜೆನ್ಸಿಯ ಹಶಮತ್‌ರಜಾ ಖಾದ್ರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಹಶಮತ್‌ರಜಾ ಶನಿವಾರ ಮಧ್ಯಾಹ್ನವೇ ನಗರದಿಂದ ಪಲಾಯನಗೈದಿದ್ದು, ಇದುವರೆಗೂ ಆತನ ಸುಳಿವು ಸಿಕ್ಕಿಲ್ಲ. ಹಶಮತ್‌ನು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿನ ಕಚೇರಿ ಬಂದ್ ಮಾಡಿದ್ದು, ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಫತೇಶಾ ನಗರದಲ್ಲಿರುವ ಆತನ ಮನೆಗೆ ಸೋಮವಾರ 200ಕ್ಕೂ ಅಧಿಕ ಜನರು ಮುತ್ತಿಗೆ ಹಾಕಿದ್ದರು.
ಈಗ ಆತನ ಕುಟುಂಬಸ್ಥರೆಲ್ಲ ಮನೆಗೆ ಕೀಲಿಹಾಕಿಕೊಂಡು ಪರಸ್ಥಳಕ್ಕೆ ಹೋಗಿದ್ದಾರೆ. ಆದರೆ ಹಶಮತ್‌ರಜಾನ ತಂದೆ ಇನ್ನು ಪೊಲೀಸರ ಸುರ್ಪದಿಯಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಸಿಸಿಬಿ ಇನ್ಸ್‌ಪೆಕ್ಟರ್ ನೇತೃತ್ವದ ತನಿಖಾ ತಂಡವೊಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು,
ಇನ್ನೊಂದು ತಂಡ ನಗರದಲ್ಲಿ ಹಶಮತ್‌ರಜಾನ ಬ್ಯಾಂಕ್ ಖಾತೆ ಮತ್ತು ಕಚೇರಿಯಲ್ಲಿನ ದಾಖಲೆ ಪತ್ರಗಳ ತಾಂತ್ರಿಕ ಪರಿಶೀಲನೆ ನಡೆಸುತ್ತಿದೆ ಹಾಗೂ ಅವನ ಆಪ್ತರು ಮತ್ತು ಪರಿಚಯಸ್ಥರ ಬಳಿ ಆತನ ನಡವಳಿಕೆ, ಚಲನವಲನಗಳ ಸೇರಿದಂತೆ ಇನ್ನಿತರೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದೆ. ಆತನ ಪತ್ತೆಗೆ ಜಾಲ ಬೀಸಿದ್ದಾರೆ.
ಹಶಮತ್‌ರಜಾನು ರಾಜ್ಯ ಮತ್ತು ದೇಶ ಬಿಟ್ಟು ಹೋಗದಂತೆ ಎಲ್ಲ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ತನಿಖಾ ತಂಡ ನಿಗಾವಹಿಸಿದೆ ಎಂದು ತಿಳಿದು ಬಂದಿದೆ. ಆತನು ದೇಶಬಿಟ್ಟು ಹೋಗದಂತೆ ಹು-ಧಾ ಪೊಲೀಸ್ ಆಯುಕ್ತರು ಈಗಾಗಲೇ ಆತನ ವಿರುದ್ಧ ಸ್ಕಾಡ್ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಶೀಘ್ರವೇ ಆತನ ಸುಳಿವು ಪತ್ತೆ ಮಾಡುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಹಶಮತ್‌ರಜಾನು ಈಗಾಗಲೇ ವಿದೇಶಕ್ಕೆ ಹೋಗಿರಬಹುದೆಂಬ ಶಂಕೆಗಳು ವ್ಯಕ್ತವಾಗುತ್ತಿವೆ.