ಕೊಲಂಬೊ: ಅಂಪೈರ್ ವಿರುದ್ಧ ಅಸಮಾಧಾನ ತೋರಿದ್ದ ಶ್ರೀಲಂಕಾದ ಟಿ20 ನಾಯಕ ವನಿಂದು ಹಸರಂಗ ಅವರಿಗೆ ಐಸಿಸಿ ಎರಡು ಪಂದ್ಯಗಳ ಅಮಾನತು ಮತ್ತು ಅವರ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.
ಹಸರಂಗ ಅವರು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಲಿಂಡನ್ ಹ್ಯಾನಿಬಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕಮಿಂದು ಮೆಂಡಿಸ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ವಫಾದರ್ ಮೊಮಾಂಡ್ ಎಸೆತದಲ್ಲಿ ನೋ-ಬಾಲ್ ನೀಡದಿರುವ ಅಂಪೈರ್ ನಿರ್ಧಾರದ ಬಗ್ಗೆ ಹಸರಂಗ ಪ್ರತಿಕ್ರಿಯಿಸಿದ್ದರು. ಈ ಘಟನೆ ಸಂಭವಿಸಿದಾಗ ಶ್ರೀಲಂಕಾಕ್ಕೆ ಮೂರು ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು. ನಂತರ ಲಂಕಾ 3 ರನ್ ಗಳಿಂದ ಸೋಲನುಭವಿಸಿತು.
“ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂತಹ ಘಟನೆಗಳು ನಡೆಯಬಾರದು” ಎಂದು ಹಸರಂಗ ಹೇಳಿದ್ದು, ಅಂಪೈರ್ ಹ್ಯಾನಿಬಲ್ ‘ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೂಕ್ತವಲ್ಲ’ ಎಂದೂ ಹೇಳಿದ್ದರು.. “ಚೆಂಡು ಸೊಂಟದ ಎತ್ತರಕ್ಕೆ ಹತ್ತಿರವಾಗಿದ್ದರೆ, ಅದು ಸಮಸ್ಯೆಯಲ್ಲ. ಆದರೆ ತುಂಬಾ ಎತ್ತರಕ್ಕೆ ಹೋಗುವ ಚೆಂಡು … ಅದು ಸ್ವಲ್ಪ ಎತ್ತರಕ್ಕೆ ಹೋಗಿದ್ದರೆ ಅದು ಬ್ಯಾಟ್ಸ್‌ಮನ್ ತಲೆಗೆ ಬಡಿಯುತ್ತಿತ್ತು. ನೀವು ಅದನ್ನು ನೋಡದಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಅಂಪೈರ್ ಸೂಕ್ತವಲ್ಲ, ಅವರು ಬೇರೆ ಕೆಲಸವನ್ನು ಮಾಡಿದರೆ ಅದು ತುಂಬಾ ಉತ್ತಮವಾಗಿರುತ್ತದೆ.” ಎಂದು ಹಸರಗ ಬಹಿರಂಗವಾಗಿಯೇ ಹೇಳಿದ್ದರು.
” ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.13 ಅನ್ನು ಉಲ್ಲಂಘಿಸಿದ್ದಕ್ಕಾಗಿ ಹಸರಂಗ ತಪ್ಪಿತಸ್ಥರೆಂದು ಕಂಡುಬಂದಿದೆ, ಇದು “ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ, ಆಟಗಾರ ಬೆಂಬಲಿಗ ಸಿಬ್ಬಂದಿ, ಅಂಪೈರ್ ಅಥವಾ ಮ್ಯಾಚ್ ರೆಫರಿಯ ವೈಯಕ್ತಿಕ ನಿಂದನೆಗೆ ಸಂಬಂಧಿಸಿದೆ” ಎಂದು ಐಸಿಸಿ ಹೇಳಿದೆ.