ಹೊಸಪೇಟೆ: ನಗರದ ಚಿತ್ತವಾಡ್ಗಿಯ ಪುರಾತನ ಶ್ರೀಆಂಜನೇಯಸ್ವಾಮಿ ಮಹಾರಥೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ
ವಿಜೃಂಭಣೆಯಿಂದ ನಡೆಯಿತು.
ಚಂದ್ರಮಾನ ಯುಗಾದಿ ಹಬ್ಬವಾದ ಏಳನೇ ದಿನಕ್ಕೆ ಜರುಗುವ ಈ ರಥೋತ್ಸವಕ್ಕೆ ಸಹ ಸ್ರಾರು ಜನರು ಸಾಕ್ಷಿಯಾದರು. ಪಾದಗಟ್ಟೆ ಬಸವಣ್ಣ ದೇವಸ್ಥಾನದ ಮುಖ್ಯ ರಸ್ತೆಯಿಂದ ಕಲ್ಮಠೇಶ್ವರ ದೇವಸ್ಥಾನದವರೆಗೆ ಭಕ್ತರು ರಥವನ್ನು ಎಳೆದರು.
ರಥಕ್ಕೆ ಹೂ-ಹಣ್ಣು ಎಸೆದು, ದಾರಿಯುದಕ್ಕೂ ಜಯ ಘೋಷಣೆ ಕೂಗಿದರು. ಪ್ರತಿವರ್ಷದಂತೆ ನಡೆಯುವ ಧ್ವಜ (ಪಟ )ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿನಲ್ಲಿ 38 ಸಾವಿರಕ್ಕೆ ಅಡಿಗಿ ಶ್ರೀಧರ್ ಪಟವನ್ನು ಪಡೆದುಕೊಂಡರು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಆಂಜನೇಯಸ್ವಾಮಿ ಪ್ರತಿಮೆಗೆ ಅಭಿಷೇಕ, ಅಲಂಕಾರಗೈದು ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು, ಸರದಿ ಸಾಲಿನಲ್ಲಿ ನಿಂತು ಆಂಜನೇಯಸ್ವಾಮಿ ದರ್ಶನ ಪಡೆದು, ಹೂ-ಹಣ್ಣು ಕಾಣಿಕೆ ಸಲ್ಲಿಸಿ ಭಕ್ತಿ ಪ್ರದರ್ಶನ ಮಾಡಿದರು. ಚಿತ್ತವಾಡ್ಗಿ, ಹೊಸಪೇಟೆ ನಗರ ಸೇರಿದಂತೆ ಹೊಸೂರು, ಎರೆಬೈಲು,ಕರೆಕಲ್ ಮಾಗಾಣಿ, ಇಪ್ಪಿತೇರಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.