Advertisement

ಯುವಕನನ್ನು ವಂಚಿಸಿದ್ದ ಹಾಸನದ ಫೇಸ್‌ಬುಕ್‌ ಗೆಳತಿ ಬಂಧನ

04:32 PM Dec 01, 2022 | Team Udayavani |

ವಿಜಯಪುರ: ಫೇಸ್‌ಬುಕ್‌ನಲ್ಲಿ ಪರಿಚಿತಳಾಗಿ, ಮದುವೆ ಆಗುವುದಾಗಿ ನಂಬಿಸಿ ವಿಜಯಪುರ ಜಿಲ್ಲೆಯ ಯುವಕನಿಂದ ಆನಲೈನ್ ಮೂಲಕ 39 ಲಕ್ಷ ರೂ. ವಂಚಿಸಿದ್ದ ಹಾಸನ ಜಿಲ್ಲೆಯ ಗೃಹಿಣಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಮೂಲದ ಕೆ.ಆರ್. ಮಂಜುಳಾ ಸ್ವಾಮಿ ಬಂಧಿತ ಗೃಹಿಣಿ.

ವಂಚನೆ ಕೃತ್ಯದಲ್ಲಿ ಪತ್ನಿಯೊಂದಿಗೆ ಸಹಕರಿಸಿದ್ದ ಪತಿ ಸ್ವಾಮಿ ಬಸವರಾಜ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ.

ಗೃಹಿಣಿಯಿಂದ ವಂಚನೆಗೀಡಾದ ಯುವಕ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ.

ಸುಂದರ ಯುವತಿಯೊಬ್ಬಳ ಫೋಟೋವನ್ನು ಫೇಸ್‌ಬುಕ್‌ ಡಿಪಿ ಇರಿಸಿಕೊಂಡು ಪರಮೇಶ್ವರನಿಗೆ ಪರಿಚಯವಾದ ಮಹಿಳೆ ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿ, ಸ್ವೀಕೃತವಾದ ಬಳಿಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ.

Advertisement

ನಂತರ ಯುವತಿ ತನ್ನ ಸಾವಿನ ನೆಪ ಹೇಳಿ, ಐಎಎಸ್ ಪಾಸಾಗಿರುವ ತನಗೆ ತುರ್ತಾಗಿ ಹಣದ ಅಗತ್ಯವಿದೆ. ನಿನ್ನನ್ನು ಮದುವೆ ಆಗುವುದಾಗಿ ನಂಬಿಸಿ ಹಲವು ಬಾರಿ ಲಕ್ಷಾಂತರ ರೂ. ಹಣವನ್ನು ಆನಲೈನ್ ಮೂಲಕ ಪಡೆದುಕೊಂಡಿದ್ದಾರೆ.

ನಂತರ ಯುವಕನೊಂದಿಗೆ ವಿಡಿಯೋ ಕಾಲ್ ಮಾಡಿ, ಆತನ ಬೆತ್ತಲೆ ಫೋಟೋ ಸಂಗ್ರಹ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ದರೆ ನಿನ್ನ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನ ಕಳೆಯುವ ಬೆದರಿಕೆಯೊಡ್ಡಿ 39 ಲಕ್ಷ ರೂ. ಹಣವನ್ನು ಕಿತ್ತುಕೊಂಡಿದ್ದಾಳೆ.

ಇಷ್ಟಾದರೂ ಹಣಕ್ಕಾಗಿ ಮಹಿಳೆಯರು ಕಿರುಕುಳ ಹೆಚ್ಚಾದಾಗ ಪರಮೇಶ್ವರ ಹಿಪ್ಪರಗಿ ವಿಜಯಪುರ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ.

ಎಸ್ಪಿ ಆನಂದಕುಮಾರ, ಎಎಸ್ಪಿ ಶಂಕರ ಮಾರಿಹಾಳ ಇವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಮ್ ಠಾಣೆ ಸಿಪಿಐ ರಮೇಶ ಅವಜಿ ತನಿಖೆಗೆ ಇಳಿದಾಗ ಫೇಸ್‌ಬುಕ್‌ ಗೆಳತಿಯಾಗಿ ವಂಚಿಸಿದ್ದ ಗೃಹಿಣಿ ಮಂಜುಳಾ ಪೊಲೀಸರಿಗೆ ಸೆರೆ ಸಿಕ್ಕಿದ್ದಾಳೆ. ಪತ್ನಿ ಮಂಜುಳಾ ವಂಚನೆಗೆ ಸಹಕರಿಸಿದ್ದ ಪತಿ ಸ್ವಾಮಿ ಬಸವರಾಜ ತಲೆ ಮರೆಸಿಕೊಂಡಿದ್ದಾನೆ.

ಬಂಧಿತಳು ವಂಚನೆ ಹಣದಿಂದ ಖರೀದಿಸಿದ್ದ ಒಂದು ಕಾರು, ಒಂದು ಬೈಕ್, ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು, ಆನ್ಲೈನ್ ಮೂಲಕ ವಂಚಿಸಿದ್ದ 4.64 ಲಕ್ಷ ರೂ. ಡಿಪಾಜಿಟ್ ಮಾಡಿರುವ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಬಂಧಿತ ವಂಚಕ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು, ಪತ್ನಿಯ ವಂಚನೆಗೆ ಸಹಕರಿಸಿ, ತಲೆ ಕರೆಸಿಕೊಂಡಿರುವ ಪತಿಯ ಬಂಧನಕ್ಕೆ ಜಾಲ ಬೀಸಿದ್ದಾಗಿ ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next