ದಾಂಡೇಲಿ : ನಗರದ ಸಮೀಪದ ಹಸನ್ಮಾಳದಲ್ಲಿರುವ ಗೌಳಿ ಬುಡಕಟ್ಟು ಸಮುದಾಯವರು ಒಂದಾಗಿ ತಮ್ಮ ಪರಂಪರಗತವಾಗಿ ಬಂದ ಗೌಳಿ ಸಂಪ್ರದಾಯದಂತೆ ದಸರಾ ಹಬ್ಬವನ್ನು ಆಚರಿಸಿ ಗಮನ ಸೆಳೆದರು.
ಹಸನ್ಮಾಳದ ಗೌಳಿ ಸಮುದಾಯದವರು ಎಲ್ಲರು ಸೇರಿ ಹತ್ತಿರದ ಕಾಡಿಗೆ ಹೋಗಿ, ತಮ್ಮ ಆರಾಧ್ಯ ದೇವರಾದ ವಿಠೋಭ ದೇವರನ್ನು ಭಜಿಸಿ ಸಾಮೂಹಿಕವಾಗಿ ಪೂಜೆ ಮಾಡುವುದರ ಮೂಲಕ ದಸರಾ ಹಬ್ಬವನ್ನು ಆಚರಿಸಿಕೊಂಡರು. ಅವರವರ ಮನೆಯಿಂದ ಮಾಡಿಕೊಂಡು ಬಂದ ನೈವೈದ್ಯವನ್ನು ಈ ಸಂದರ್ಭದಲ್ಲಿ ದೇವರ ಹೆಸರಲ್ಲಿ ಬಡಿಸಿ, ಪೂಜಿಸಿ ಸಮರ್ಪಿಸಲಾಯ್ತು. ತಮ್ಮ ತಮ್ಮ ಮನೆಗಳಿಂದ ಮಣ್ಣಿನ ಮಡಕೆಯಲ್ಲಿ ತಂದಿದ್ದ ಮಜ್ಜಿಗೆಯನ್ನು ಕುಡಿದು ಪರಸ್ಪರ ಒಬ್ಬರ ಮೇಲೊಬ್ಬರು ಎರಚಿ ವಿಶಿಷ್ಟ ಆರಾಧನೆಯಲ್ಲಿ ತೊಡಗಿಕೊಂಡರು. ಇಲ್ಲಿ ಪ್ರತಿಯೊಬ್ಬರು ಕಂಬಳಿಯನ್ನು ಹೊದ್ದಿರಬೇಕಾಗಿದ್ದು, ಹೊದ್ದಿರುವ ಕಂಬಳಿಯ ಮೇಲೆ ಮಜ್ಜಿಗೆಯನ್ನು ಎರೆಯಲಾಗುತ್ತದೆ.
ತಮ್ಮ ತಮ್ಮ ಮನೆಗಳಿಂದ ತಂದ ನೈವೈಧ್ಯಗಳನ್ನು ಬಡಿಸಿ, ತಮ್ಮ ತಮ್ಮ ಅಬೀಷ್ಟೆಗಳನ್ನು ಪ್ರಾರ್ಥಿಸಿ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಸರಿ ಸುಮಾರು 5 ರಿಂದ 6 ಗಂಟೆಗಳ ಅವಧಿಯವರೆಗೆ ಹಸನ್ಮಾಳದ ಕಾಡಿನಲ್ಲೆ ಗೌಳಿ ಸಮಾಜ ಬಾಂಧವರು ಪೂಜಾರಾಧನೆಯಲ್ಲಿ ತೊಡಗಿಸಿಕೊಂಡು, ಬಳುವಳಿಯಾಗಿ ಬಂದ ಸಂಸ್ಕೃತಿ ಮತ್ತು ಸಂಸ್ಕಾರಗಳ ಆಚರಣೆಯನ್ನು ಮುಂದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಗೌಳಿ ಸಮುದಾಯದವರು ಭಾಗವಹಿಸಿದ್ದರು.
ಇದನ್ನೂ ಓದಿ :ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ
ಈ ನೆಲದ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಗೌಳಿ ಸಮುದಾಯವು ತನ್ನದೇ ಆದ ರೀತಿಯಲ್ಲಿ ಪರಂಪರಗತವಾಗಿ ಬಂದ ಸಂಸ್ಕೃತಿ, ಸಂಸ್ಕಾರಗಳಿಗೆ ಎಲ್ಲಿಯೂ ಆಧುನಿಕ ಸ್ಪರ್ಷ ನೀಡದೆ ಮುಂದುವರಿಸಿಕೊಂಡು ಹೋಗುತ್ತಿರುವುದು ಗೌಳಿ ಸಮುದಾಯದ ಮಹತ್ವದ ಕಾರ್ಯ ಎಂದೆ ಹೇಳಬಹುದು.