Advertisement

Hasanamba: ನೋಡ ಬನ್ನಿ ಹಾಸನಾಂಬೆ ಹಸನ್ಮುಖ…

12:03 PM Nov 05, 2023 | Team Udayavani |

ಕಳೆದ 2-3 ದಶಕಗಳ ಹಿಂದೆ ಕಂಡೂ ಕಾಣದಂತಿದ್ದ ಶ್ರೀಹಾಸನಾಂಬೆಯ ಮಹಿಮೆ, ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ನಾಡಿನಾ ದ್ಯಂತ ಪಸರಿಸುತ್ತಾ ಬಂದಿದೆ. ಸಾಮಾನ್ಯವಾಗಿ ಊರ ಜಾತ್ರೆಯಂತೆ ಸರಳವಾಗಿ ನಡೆಯುತ್ತಿದ್ದ ಶ್ರೀಹಾಸನಾಂಬ ಜಾತ್ರೋತ್ಸವ ಈಗ ಲಕ್ಷಾಂತರ ಜನಸೇರುವ ಅದ್ದೂರಿ ಉತ್ಸವವಾಗಿ ಮಾರ್ಪಾಡಾಗಿದೆ.

Advertisement

ಶ್ರೀಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ದೇಗುಲ, ಅದರ ಪರಿಸರ, ಆಕರ್ಷಣೀಯವಾಗುತ್ತಾ ಬಂದಿದೆ. ಮೂಲ ಸೌಕರ್ಯ ಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಕೆಲವೇ ದಿನಗಳ ದರ್ಶನಾವಧಿಯಲ್ಲಿ ಕೋಟ್ಯಾಂತರ ರೂ. ಆದಾಯ ಕೂಡ ಬರುತ್ತಿದ್ದು, ಹಾಸನಾಂಬ ದೇವಾಲಯ “ಎ’ ದರ್ಜೆಯ ದೇವಾಲಯಗಳ ಪಟ್ಟಿಗೆ ಸೇರ್ಪಡೆ ಯಾಗಿದೆ. ಕೇವಲ 2 ದಶಕಗಳಲ್ಲಿ ಇಷ್ಟಲ್ಲಾ ಬೆಳವಣಿಗೆ ಗಳಾಗಿವೆ ಎಂಬುದು ಮಾತ್ರ ಶ್ರೀ ಹಾಸನಾಂಬೆಯ ಪವಾಡದಷ್ಟೇ ಅಚ್ಚರಿ!

ಪೌರಾಣಿಕ ಹಿನ್ನೆ‌ಲೆ:

ಪೌರಾಣಿಕ ಕಥೆಗಳ ಪ್ರಕಾರ, ಅಂಧಕಾಸುರನೆಂಬ ರಾಕ್ಷಸನು ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿ ವರ ಪಡೆದು ಬಲಿಷ್ಠನಾಗುತ್ತಾನೆ. ಮೂರೂ ಲೋಕದಲ್ಲೂ ಅಂಧಕಾಸುರನ ಉಪಟಳ ಹೆಚ್ಚಿದಾಗ, ಅಂಧಕಾಸುರನನ್ನು ಕೊಲ್ಲಲು ಶಿವನು ಬಂದಾಗ ಇಬ್ಬರ ನಡುವೆ ಘೋರ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಅಂಧಕಾಸುರನ ರಕ್ತದ ಒಂದೊಂದು ಹನಿಯೂ ರಾಕ್ಷಸನಾಗಿ ಮರುಜೀವ ಪಡೆಯುತ್ತದೆ. ಇದನ್ನು ನಿಯಂತ್ರಿಸಲಾಗದೆ ಶಿವನು ತನ್ನ ಬಾಯಿಯಿಂದ ಯೋಗೇಶ್ವರಿಯನ್ನು ಸೃಷ್ಟಿಸಿದ. ಇತರ ದೇವತೆಗಳು ಶಿವನ ಸಹಾಯಕ್ಕಾಗಿ ತಮ್ಮ ಶಕ್ತಿಯನ್ನು ಸಪ್ತ ಮಾತೃಕೆಯರಾಗಿ ಕಳುಹಿಸುತ್ತಾರೆ. ಅವರೇ ಬ್ರಾಹ್ಮಿ, ಮಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗೂ ಚಾಮುಂಡಿ ಎಂಬ ಸಪ್ತ ಮಾತೃಕೆಯರು.

ಸಪ್ತ ಮಾತೃಕೆಯರು ವಾರಣಾಸಿಯಿಂದ ದಕ್ಷಿಣದ ಕಡೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೇ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಚಾಮುಂಡಿ, ವರಾಹಿ, ಇಂದ್ರಾಣಿಯು ದೇವಿಗೆರೆಯ ಮತ್ತು ಬ್ರಾಹ್ಮೀ ದೇವಿಯು ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಸಪ್ತಮಾತೃಕೆಯರು ಸದಾ ನಗುವ ಹಸನ್ಮುಖೀ ದೇವತೆ ಗಳಾಗಿದ್ದರಿಂದ, ಮುಂದೆ ಹಸನ್ಮುಖೀ ಹಾಸನವಾಗಿದೆ ಎಂದು ಅರ್ಥೈಸಲಾಗಿದೆ. ಪೌರಾಣಿಕ ಹಿನ್ನೆಲೆಗೆ ಸಪ್ತ ಮಾತೃಕೆಯರ ದೇವಾಲಯಗಳು ಈಗಲೂ ಕುರುಹುಗಳಾಗಿ ಹಾಸದ ಸುತ್ತಮುತ್ತ ಸಿಗುತ್ತವೆ.

Advertisement

ಐತಿಹಾಸಿಕ ಮಹತ್ವ:

ಐತಿಹಾಸಿಕ ಮಾಹಿತಿಗಳ ಪ್ರಕಾರ, ಹಾಸನವು ಚೋಳರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರಾದ ಹೊಯ್ಸಳರಿಗೂ ಪೂರ್ವಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಬುಕ್ಕನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು. ಒಮ್ಮೆ ನಾಯಕನು ಪ್ರಯಾಣಿಸುತ್ತಿರುವಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕನು ನೊಂದುಕೊಂಡನು. ಆಗ ಅವನಿಗೆ ಹಾಸನಾಂಬೆ ಪ್ರತ್ಯಕ್ಷಳಾಗಿ, “ಮಗು, ಖನ್ನ ಮನಸ್ಸು ಬಿಡು. ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟು’ ಎಂದು ಹೇಳಿದಳಂತೆ. ಆ ನಂತರ ಅಲ್ಲಿಯೇ ಕೃಷ್ಣಪ್ಪ ನಾಯಕನು ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬೆ ಎಂದು ಹೆಸರಿಟ್ಟನು. ಹಾಸನ ತಾಲೂಕಿನ ಕುದುರು ಗುಂಡಿ ಗ್ರಾಮದಲ್ಲಿರುವ ಕ್ರಿ. ಶ. 1140ರ ವೀರಗಲ್ಲಿನ ಶಿಲಾ ಶಾಸನದಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಪೂಜಾ ವಿಧಿ-ವಿಧಾನ:

ವರ್ಷಕ್ಕೊಮ್ಮೆ ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿನ ತಳವಾರ ಮನೆತನದವರು ಹಾಜರಿದ್ದು, ದೇವಿಯ ಗರ್ಭಗುಡಿಯ ಮುಂದೆ ಬಾಳೆಯ ಕಂದನ್ನು ನೆಟ್ಟು ದೇವಿಯನ್ನು ಭಜಿಸುತ್ತಾ ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ಪ್ರಖರ ದೃಷ್ಠಿ ಭಕ್ತರ ಮೇಲೆ ದುಷ್ಪರಿಣಾಮ ಬೀರುವುದೆಂಬ ನಂಬಿಕೆಯಿಂದ ಹೀಗೆ ಮಾಡಲಾಗುತ್ತದೆ. ಬಾಳೆಮರವನ್ನು ಕಡಿದು ದೃಷ್ಠಿ ನಿವಾರಿಸಿದ ನಂತರವೇ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತದೆ.

ದೇವಾಲಯದ ಬಾಗಿಲು ತೆಗೆದ ಮೊದಲನೇ ದಿನ ಹಾಸನಾಂಬೆಗೆ ಅಲಂಕಾರವಿರಲ್ಲ. ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದಿರಿಸಿದ್ದ ವಸ್ತ್ರ-ಆಭರಣಗಳನ್ನು ಎರಡನೇ ದಿನ ದೇವಿಗೆ ಅಲಂಕರಿಸಿ, ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸಲಾಗುತ್ತದೆ. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಲ್ಲಿ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುತ್ತಾರೆ.

ಬಲಿಪಾಡ್ಯಮಿಯಂದು ತುಪ್ಪದ ದೀಪವನ್ನು ಬೆಳಗಿಸಿ ಹಾಸನಾಂಬೆಯ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಜೊತೆಗೆ ಹೂಗಳೊಂದಿಗೆ, ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಪವಾಡವೆಂದರೆ, ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವವರೆಗೂ ಆ ದೀಪಗಳು ಉರಿಯುತ್ತಲೇ ಇದ್ದು, ಹೂಗಳು ತಾಜಾವಾಗಿರುತ್ತದೆ. ಪ್ರಸಾದವು ಕೂಡಾ ಹಾಳಾಗದೆ ಇರುತ್ತದೆ!

ವರ್ಷಕ್ಕೊಮ್ಮೆ ಮಾತ್ರ ಯಾಕೆ ದರ್ಶನ?:

ಸಪ್ತ ಮಾತೃಕೆಯರ ಜೊತೆ ಅವರ ಸಹೋದರ ಸಿದ್ಧೇಶ್ವರನೂ ಬಂದಿದ್ದ. ಆತ ಭಕ್ತರ ಪೂಜೆ, ಪ್ರಾರ್ಥನೆಗೆ ಮಾರು ಹೋಗಿ, ಭಕ್ತರು ನೀಡುವ ಭಕ್ಷ್ಯಗಳನ್ನೆಲ್ಲ ಮಡಿ-ಮೈಲಿಗೆ ಎನ್ನದೆ ತಿನ್ನುತ್ತಿದ್ದ. ಶುದ್ಧ ಸಸ್ಯಾಹಾರ ಮತ್ತು ಮಡಿ ಬಯಸುತ್ತಿದ್ದ ಸಪ್ತ ಮಾತೃಕೆಯರು ಸಿದ್ಧೇಶ್ವರನ ಧೋರಣೆಗೆ ಬೇಸತ್ತು, ವರ್ಷಕ್ಕೊಮ್ಮೆ ಮಾತ್ರ ಕಾಣಸಿಕೊಳ್ಳುತ್ತೇವೆ ಎಂದು ಹೇಳಿದರಂತೆ. ಹಾಗಾಗಿ ಸಪ್ತ ಮಾತೃಕೆಯರಿಗೆ ವರ್ಷಕ್ಕೊಮ್ಮೆ ಮಾತ್ರ ಪೂಜೆ. ಹಾಸನಾಂಬ ದೇವಾಲಯದ ಆವರಣ  ದಲ್ಲಿಯೇ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪ್ರತಿದಿನವೂ ಪೂಜೆ ನಡೆಯುತ್ತದೆ.

ಸರಳ ಜಾತ್ರೆ, ಅದ್ಧೂರಿಜನೋತ್ಸವವಾಯ್ತು : 

ಅನಾದಿ ಕಾಲದಿಂದಲೂ ಶ್ರೀ ಹಾಸನಾಂಬೆಯ ಜಾತ್ರೋತ್ಸವವು ಊರ ಜಾತ್ರೆಯಂತೆ ಸರಳವಾಗಿ ನಡೆಯುತ್ತಿತ್ತು. ಶ್ರೀ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ದೇವಾಲಯಗಳು ಕಲ್ಲುಕಂಬ, ಕಲ್ಲು ಚಪ್ಪಡಿಗಳಿಂದ ನಿರ್ಮಾಣವಾದ ಸಾಮಾನ್ಯ ಗುಡಿಗಳಂತೆ, ದೇವಾಲಯದ ಆವರಣದಲ್ಲಿ ಸಹಜವಾಗಿ ಬೆಳೆದ ಗರಿಕೆಯ ಹಾಸು ಇತ್ತು. ಪೂರ್ವದಿಕ್ಕಿನ ಏಕೈಕ ಪ್ರವೇಶ ದ್ವಾರವೂ ಕಲ್ಲು ಕಂಬ ಗಳಿಂದ ನಿರ್ಮಾಣವಾಗಿತ್ತು. ಜಾತ್ರೋತ್ಸವದ ಸಂದರ್ಭದಲ್ಲಿ ಅರ್ಚಕರು ಸುಣ್ಣ ಬಳಿದು, ಮಡಿಯುಟ್ಟು ನಡೆಸುತ್ತಿದ್ದ ಪೂಜಾ ಕೈಂಕರ್ಯಗಳೊಂದಿಗೆ ಜಾತ್ರೋತ್ಸವ ಕಂಡೂ ಕಾಣದಂತೆ ನಡೆದು ಹೋಗುತ್ತಿತ್ತು. ಖ್ಯಾತನಾಮರೂ ದೇವಾಲಯಕ್ಕೆ ಆಡಂಬರದೊಂದಿಗೆ ಬರುತ್ತಿರಲಿಲ್ಲ. ಆದರೆ ಈಗ ಹಾಸನಾಂಬೆಯ ಖ್ಯಾತಿ ರಾಜ್ಯ, ಹೊರ ರಾಜ್ಯಗಳಿಗೂ ಹರಡಿ ಪ್ರತಿ ವರ್ಷ 8 -10 ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ಧೇಶ್ವರಸ್ವಾಮಿಯ ಗುಡಿ ಈಗ ಕಲ್ಲು ಕಂಬ, ಚಪ್ಪಡಿಗಳ ಹೊಸ ನಿರ್ಮಾಣದಿಂದ ವರ್ಣರಂಜಿತವಾಗಿ ಕಂಗೊಳಿಸುತ್ತಿವೆ. ಅತ್ಯಾಕರ್ಷಕ ರಾಜಗೋಪುರ ನಿರ್ಮಾಣವಾಗಿದೆ. ದೇವಾಲಯ ಆವರಣ ಆಧುನಿಕತೆಯ ಸೌಲಭ್ಯಗಳೊಂದಿಗೆ ವಿಸ್ತಾರವಾಗಿದೆ. ಜಾಗದ ಕೊರತೆಯಿಂದಾಗಿ ದೇವಾಲಯದ ಅವರಣದಲ್ಲಿದ್ದ ಅರ್ಚಕರ ನಿವಾಸವೂ ತೆರವಾಗಿದೆ. ಊರ ಉತ್ಸವದಂತೆ ನಡೆಯುತ್ತಿದ್ದ ಜಾತ್ರೋತ್ಸವ ಈಗ 3-4 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next