ಹಾಸನ: ಹೊಳೆನರಸೀಪುರದ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳು ಶುಭ್ರವಾಗಿ ಕ್ಲಿನಿಕಲ್ ಲ್ಯಾಬ್ಗ ಬರಬೇಕು ಎಂಬ ಮಾರ್ಗದರ್ಶಕರ ಸೂಚನೆ ವಿವಾದ ಸೃಷ್ಟಿಸಿದ್ದು ಉನ್ನತಾಧಿಕಾರಿಗಳ ಮಧ್ಯ ಪ್ರವೇಶದಿಂದ ವಿವಾದ ಸದ್ಯಕ್ಕೆ ತಿಳಿಯಾಗಿದೆ.
ಇಲ್ಲಿ ಪ್ರಧಾನ ಮಂತ್ರಿ ವಿಶೇಷ ವಿದ್ಯಾರ್ಥಿ ವೇತನ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ ಮೂಲದ ಒಟ್ಟು 14 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಉದ್ದನೆಯ ಗಡ್ಡ ಬಿಟ್ಟುಕೊಂಡು, ಶೂ ಧರಿಸದೆ ಸರಕಾರಿ ಆಸ್ಪತ್ರೆಯ ಕ್ಲಿನಿಕಲ್ ಲ್ಯಾಬ್ಗ ಹಾಜರಾಗುತ್ತಿದ್ದ ಬಗ್ಗೆ ಲ್ಯಾಬ್ನ ಮಾರ್ಗದರ್ಶಕ ಆಕ್ಷೇಪ ವ್ಯಕ್ತಪಡಿಸಿ, ಗಡ್ಡ ಟ್ರಿಮ್ ಮಾಡಿಕೊಂಡು, ಶೂ ಧರಿಸಿ ಶುಭ್ರವಾಗಿ ಲ್ಯಾಬ್ ಗೆ ಬರಬೇಕೆಂದು ತಾಕೀತು ಮಾಡಿದ್ದರು.
ಆದರೂ ಕಣಿವೆ ರಾಜ್ಯದ ವಿದ್ಯಾರ್ಥಿಗಳು ಸೇರಿ ಕೆಲವು ವಿದ್ಯಾರ್ಥಿಗಳು ಉದ್ದದ ಗಡ್ಡ ಬಿಟ್ಟುಕೊಂಡೇ ಲ್ಯಾಬ್ಗ ಬಂದಾಗ ಒಳ ಸೇರಿಸದೆ ಕೆಲ ಹಿಂದೂ ವಿದ್ಯಾರ್ಥಿಗಳೂ ಸೇರಿ 18 ವಿದ್ಯಾರ್ಥಿಗಳನ್ನು ಲ್ಯಾಬ್ನ ಹೊರಗೆ ನಿಲ್ಲಿಸಿದ್ದರು. ಈ ಬೆಳವಣಿಗೆಯನ್ನು ಜಮ್ಮು- ಕಾಶ್ಮೀರದ ವಿದ್ಯಾರ್ಥಿಗಳು ತಿರುಚಿ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಶನ್ಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಅಸೋಸಿಯೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶನಿವಾರ ಪತ್ರ ಬರೆದು ವಿದ್ಯಾರ್ಥಿಗಳ ಹಿತ ಕಾಯಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು.
ಕಾಲೇಜು ನಿಯಮ, ಶಿಸ್ತು ಪಾಲನೆಗೆ ಬದ್ಧ
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪ್ರಾಂಶುಪಾಲ ಚಂದ್ರಶೇಖರ್ ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ರವಿವಾರ ಮಾತುಕತೆ ನಡೆಸಿದರು. ಅದರಂತೆ ವಿದ್ಯಾರ್ಥಿಗಳು ಕಾಲೇಜಿನ ನಿಯಮ ಮತ್ತು ಶಿಸ್ತು ಪಾಲಿಸಲು ಬದ್ಧರಾಗಿದ್ದೇವೆ. ಈ ವಿಷಯವನ್ನು ಇಲ್ಲಿಗೆ ಬಿಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.