Advertisement
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ಅವರ ಪುರುಷತ್ವ ಪರೀಕ್ಷಾ ವರದಿ ಎಸ್‌ಐಟಿ ಅಧಿಕಾರಿಗಳಿಗೆ ಲಭಿಸಿದ್ದು, ಅದು ಸಹ ಪ್ರಜ್ವಲ್ ವಿರುದ್ಧದ ಸಾಕ್ಷ್ಯವಾಗಲಿದೆ. ಕೆಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಪದೇಪದೆ ಪುರುಷತ್ವ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಮುಜುಗರವಾಗುತ್ತದೆ ಎಂದು ಈ ಹಿಂದೆ ನ್ಯಾಯಾಲಯದ ಮುಂದೆ ಪ್ರಜ್ವಲ್ ಅಳಲು ತೋಡಿಕೊಂಡಿದ್ದರು. ಧ್ವನಿ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳ ವರದಿ ಎಫ್ಎಸ್‌ಎಲ್‌ನಿಂದ ಬರಬೇಕಿದೆ. ಈ ವರದಿಗಳು ಪೂರಕವಾಗಿದ್ದರೆ ಅವುಗಳು ಕೂಡ ಪ್ರಜ್ವಲ್ ವಿರುದ್ಧದ ಪ್ರಬಲ ಸಾಕ್ಷ್ಯಗಳಾಗಲಿವೆ.
ಪ್ರಜ್ವಲ್ ವಿರುದ್ಧ ದಾಖಲಾಗಿರುವ 5 ಪ್ರಕರಣಗಳಲ್ಲಿ ಎಸ್‌ಐಟಿ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ದೂರುದಾರ ಮಹಿಳೆಯರ ಕುರಿತು ತನಿಖಾಧಿಕಾರಿಗಳು ಪ್ರಶ್ನಿಸಿದಾಗ “ನನಗೇನೂ ಗೊತ್ತಿಲ್ಲ’ ಎಂದು ತಿಳಿಸಿದ್ದರು. ಇತ್ತೀಚೆಗೆ ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಯ ಬಗ್ಗೆ ವಿಚಾರಿಸಿದಾಗ, “ನನಗೆ ಅವರು ಯಾರೆಂಬುದೇ ಗೊತ್ತಿಲ್ಲ’ ಎಂದು ಪ್ರಜ್ವಲ್ ಹೇಳಿದ್ದಾರೆನ್ನಲಾಗಿದೆ. ಪ್ರಜ್ವಲ್ ಜಾಮೀನು ಅರ್ಜಿ: ಇಂದು ವಿಚಾರಣೆ
ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಜ್ವಲ್ ವಿರುದ್ಧ ಹಾಸನದ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಸಿಐಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ. ಈ ಸಂಬಂಧ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಹಾಗಾಗಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಜಾಮೀನು ಕೋರಿದ್ದರೆ, ಸಿಐಡಿ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಅರ್ಜಿಗಳ ವಿಚಾರಣೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಗದಿಯಾಗಿದೆ.