Advertisement

ಲೋಕ ಸಮರ: ಗೆಲುವಿಗಾಗಿ ಕೈ ತಾಲೀಮು!

03:59 PM Jun 15, 2023 | Team Udayavani |

ಹಾಸನ: ಈ ಬಾರಿ ವಿಧಾಸನಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಮತಗಳಿಕೆಯಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್‌, 1999ರ ನಂತರ ಲೋಕಸಭಾ ಸ್ಥಾನವನ್ನೂ ಗೆಲ್ಲಲು ಈಗಿನಿಂದಲೇ ಯೋಜನೆ ರೂಪಿಸುತ್ತಿದೆ.

Advertisement

ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಗೆದ್ದಿರುವುದು ಅರಸೀಕೆರೆ ಕ್ಷೇತ್ರ ಮಾತ್ರ. ಆದರೆ, ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಮೊದಲಾದ ಕ್ಷೇತ್ರಗಳಲ್ಲಿ ಮತಗಳಿಕೆ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ಇದರ ಜೊತೆಗೆ ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಬರೋಬ್ಬರಿ ಎರಡು ದಶಕಗಳ ನಂತರ ಎಂಪಿ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕೈ ನಾಯಕರು ಕಾರ್ಯತಂತ್ರ ಹಣೆಯುತ್ತಿದ್ದಾರೆ.

1999ರಲ್ಲಿ ಮಾಜಿ ಸಂಸದ ದಿ.ಜಿ.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್‌ನಿಂ ದ ಗೆದ್ದು ಲೋಕಸಭೆ ಸದಸ್ಯರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಜಯ ಸಿಕ್ಕಿಲ್ಲ. ಈ ಬಾರಿ ಶತಾಯಗತಾಯ ವಿಜಯಲಕ್ಷ್ಮೀ ಒಲಿಸಿಕೊಳ್ಳಬೇಕು ಎಂದು ಕೈ ನಾಯಕರು ವಿಶೇಷ ಆಸ್ತೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿ, ಈಗಾಗಲೇ ಚರ್ಚೆ ಸಹ ಆರಂಭವಾಗಿದೆ.

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ: ಈ ಮೊದಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಚ್‌.ಕೆ.ಮಹೇಶ್‌ ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರ ಜೊತೆಗೆ ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ಶ್ರೇಯಸ್‌ ಎಂ.ಪಟೇಲ್‌, ಶ್ರವಣಬೆಳಗೊಳ ಪರಾಜಿತ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ಹಾಗೂ ಬೇಲೂರು ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಿ.ಶಿವರಾಂ ಅವರ ಹೆಸರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಕೊಂಡಿವೆ.

ಯಾರಿಗೆ ಸಿಗಬಹುದು ಚಾನ್ಸ್‌: ಮಾಜಿ ಸಚಿವ ಬಿ. ಶಿವರಾಂ 2009ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿ 2,01,147 ಮತ ಪಡೆದು ಪರಾಭವಗೊಂಡಿದ್ದರು. ಆದರೆ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಮತಗಳನ್ನು ಪಡೆದರು ಸಹ ಬೇಲೂರು ಕ್ಷೇತ್ರದಲ್ಲಿ ಕೆಲವೆ ಸಾವಿರ ಮತಗಳಿಂದ ಪರಾಜಿತರಾಗಿದ್ದರು. ಪಕ್ಷದಲ್ಲಿ ತನ್ನದೆ ಆದ ಹವವನ್ನು ಇಟ್ಟಿಕೊಂಡಿ ರುವ ಬಿ.ಶಿವರಾಂ ಅವರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಎಚ್‌.ಕೆ.ಮಹೇಶ್‌, ಈ ಹಿಂದೆ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇವರ ನ್ನೂ ಹೈಕಮಾಂಡ್‌ ಪರಿಗಣಿಸುವುದು ಕಡಿಮೆ ಎಂದೇ ಹೇಳಲಾಗುತ್ತಿದೆ. ಎಂ.ಎ.ಗೋಪಾಲಸ್ವಾಮಿ ಒಮ್ಮೆ ಎಂಎಲ್‌ಸಿಯಾಗಿ ಸೇವೆ ಸಲ್ಲಿಸಿದ್ದು ಈ ಬಾರಿ ವಿಧಾನ ಸಭೆಗೆ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರೂ, ಮತಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

Advertisement

ಅಂತೆಯೇ ಶ್ರೇಯಸ್‌ ಪಟೇಲ್‌ ಸಹ ಮೊದಲ ಬಾರಿಗೆ ಸ್ಪರ್ಧೆ ಮಾಡಿದರೂ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಗಣನೀಯವಾಗಿ ಮತ ಬೇಟೆಯಾಡಿ ಕೇವಲ 3,100 ಮತಗಳ ಅಂತರದಿಂದ ಸೋತರೂ ರಾಜ್ಯದ ಗಮನ ಸೆಳೆದಿದ್ದಾರೆ. ಹಾಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಮಣೆ ಹಾಕಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೇಯಸ್‌ ಪಟೇಲ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಹೇಳಿ ಕೇಳಿ ಶ್ರೇಯಸ್‌ ಅವರ ತವರು ಹೊಳೆನರಸೀಪುರ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಸಹ ಇದೇ ಊರಿನವರು. ಜೆಡಿಎಸ್‌ನಿಂದ ಪ್ರಜ್ವಲ್‌ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೌದಾದರೆ ಕಾಂಗ್ರೆಸ್‌ನಿಂದ ಶ್ರೇಯಸ್‌ ಪೈಪೋಟಿ ಗಿಳಿಯುವುದು ಶತಸಿದ್ಧ ಎನ್ನಲಾಗುತ್ತಿದೆ.

ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಕೆ.ಸುರೇಶ್‌ ಮೊದಲಾದವರು ಸ್ಪರ್ಧೆ ತಯಾರಾಗುವಂತೆ ಮೌಖೀಕ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೇಯಸ್‌ಗೆ ಅವಕಾಶ ನೀಡುವುದರಿಂದ ಯುವಕರಿಗೂ ಆದ್ಯತೆ ನೀಡಿದಂತಾಗುತ್ತದೆ. ಜೊತೆಗೆ ಎದುರಾಳಿಯನ್ನು ಹಣಿಯಲು ಸಮರ್ಥರಿಗೆ ಮಣೆ ಹಾಕಿದಂತೆ ಆಗಲಿದೆ ಎಂಬುದು ಕೈ ನಾಯಕರ ಲೆಕ್ಕಾಚಾರವಾಗಿದೆ.

ಲೋಕಸಭೆ ಚುನಾವಣೆ ಅಭ್ಯರ್ಥಿ ಸಂಬಂಧ ರಾಜ್ಯದ ಹಲವು ನಾಯಕರು ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಆದರೆ, ಯಾವುದೇ ಸ್ಪಷ್ಟ ತೀರ್ಮಾನ ಹೇಳಿಲ್ಲ. ಒಂದು ವೇಳೆ ನಮ್ಮ ಪಕ್ಷ ಹಾಗೂ ಎಲ್ಲಾ ಹಿರಿಯ ನಾಯಕರು ಒಮ್ಮತದ ತೀರ್ಮಾನ ಮಾಡಿ ನೀನೇ ಅಭ್ಯರ್ಥಿಯಾಗಬೇಕು ಎಂದು ಸೂಚಿಸಿದರೆ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ಜಿಲ್ಲೆಯ ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ● ಶ್ರೇಯಸ್‌ ಪಟೇಲ್‌, ಟಿಕೆಟ್‌ ಆಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next