ಲಂಡನ್: ಸದ್ಯ ಕೆಲಸ ಸಿಕ್ಕದರೆ ಸಾಕು, ಸಂಬಳ ಕೊಟ್ಟರೆ ಸಾಕು ಅಂದುಕೊಳ್ಳುವ ಸ್ಥಿತಿಯಲ್ಲಿ ಜನರಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕಳೆದ 15 ವರ್ಷಗಳಿಂದ ಕೆಲಸ ಮಾಡದೇ, ಅನಾರೋಗ್ಯದ ಕಾರಣದಿಂದ ರಜೆಯಲ್ಲಿರುವ ವ್ಯಕ್ತಿಯೊಬ್ಬ ಲಂಡನ್‌ನಲ್ಲಿ ಐಬಿಎಂ ಕಂಪನಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಅದೂ ಪ್ರತೀ ವರ್ಷ ವೇತನ ಏರಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ!
ಇಯಾನ್ ಕ್ಲಿಫರ್ಡ್ 2008ರಲ್ಲಿ ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿದ್ದರು. 2013ರಲ್ಲೂ ಪರಿಸ್ಥಿತಿ ಹಾಗೆಯೇ ಮುಂದುವರಿದಾಗ ಅವರು ಕಂಪನಿಯೊಂದಿಗೆ ತಮ್ಮ ಗೋಳು ತೋಡಿಕೊಂಡರು. ಕಡೆಗೆ ಅವರಿಗೆ ಅಶಕ್ತತೆ ಆರೋಗ್ಯ ಯೋಜನೆಯಲ್ಲಿ ಕೆಲಸ ಮುಂದುವರಿಸಲಾಯಿತು. ವರ್ಷಕ್ಕೆ 55 ಲಕ್ಷ ರೂ.ಗಿಂತ ಅಧಿಕ ವೇತನವಿತ್ತು. ಅಶಕ್ತತೆ ಯೋಜನೆಯಡಿ ಒಬ್ಬ ವ್ಯಕ್ತಿಗೆ ಕೆಲಸ ಮಾಡಲು ಸಾಧ್ಯವಿರುವುದಿಲ್ಲ, ಆದರೆ ಉದ್ಯೋಗಿಯಾಗಿ ಮುಂದುವರಿಯುವ ಆಸಕ್ತಿಯಿರುತ್ತದೆ, ಅಂ¤ಹವರ ಕೆಲಸ ಉಳಿಸಲಾಗುತ್ತದೆ. ಆದರೆ ಹೊಣೆ ಇರುವುದಿಲ್ಲ.
ಇದರಡಿ 2013ರಿಂದ ಅವರಿಗೆ ವರ್ಷಕ್ಕೆ 55 ಲಕ್ಷ ರೂ. ವೇತನ ನೀಡಲಾಗುತ್ತಿತ್ತು. ಇದರಲ್ಲೇ ಶೇ.25 ವೇತನವನ್ನು ಕಡಿತ ಮಾಡಲಾಗುತ್ತಿತ್ತು. ಅವರ 65 ವರ್ಷದವರೆಗೆ ಇದೇ ವೇತನ ನೀಡಲು ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಈ ವೇಳೆ ಅವರಿಗೆ ಮತ್ತೆ ಹೊಸ ತಕರಾರು ತೆಗೆಯುವಂತಿಲ್ಲವೆಂದು ತಿಳಿಸಲಾಗಿತ್ತು.
ಆದರೆ ಇದೀಗ ಮತ್ತೆ ಸದ್ಯದ ಬೆಲೆಯೇರಿಕೆಯಿಂದ ಜೀವನ ಕಷ್ಟವಾಗಿದೆ, ಈ ವೇತನ ಸಾಕಾಗುತ್ತಿಲ್ಲ. ವರ್ಷ, ವರ್ಷ ವೇತನ ಏರಿಸುತ್ತಿಲ್ಲವೆಂದು ದೂರಿದ್ದಾರೆ. ಅವರು ಅಶಕ್ತತೆ ಯೋಜನೆಯಡಿ ಕೆಲಸವುಳಿಸಿಕೊಂಡಿದ್ದರೂ, ಇತರೆ ಮಾಮೂಲಿ ವ್ಯಕ್ತಿಗಳೊಂದಿಗೆ ತಮ್ಮನ್ನು ಹೋಲಿಸಿಕೊಂಡು ಬರ್ಕ್‌ಶೈರ್ ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ ನ್ಯಾಯಾಲಯ ಖುಲ್ಲಂಖುಲ್ಲ ಅವರ ವಾದವನ್ನು ತಳ್ಳಿ ಹಾಕಿದೆ. ನಿಮಗೆ ಇಷ್ಟು ಕೊಡುವುದೇ ದೊಡ್ಡದು ಎಂದು ತೀರ್ಪು ನೀಡಿದೆ.