ಕೋಲಾರ: 20 ವರ್ಷಗಳಿಂದಲೂ ಬಳಕೆಯಾಗದೇ 13 ವಾಹನಗಳು ದೂಳು ಹಿಡಿಯುತ್ತಿದ್ದು, ಜಿಪಂ ಕಚೇರಿ ಆವರಣ ಹಳೆಯ ವಾಹನಗಳ ಗುಜರಿಯಾಗಿದೆ. ಜಿಲ್ಲಾ ಪರಿಷತ್ ಇದ್ದ ಕಾಲದಲ್ಲಿ ಖರೀದಿ ಸಿದ್ದ ವಾಹನಗಳನ್ನು ಹೊಸ ವಾಹನ ಖರೀದಿ ನಂತರ ಮೂಲೆ ಗುಂಪು ಮಾಡಲಾ ಗಿದ್ದು, ಅವುಗಳನ್ನು ಜಿಪಂ ಅಧಿಕಾರಿಗಳು ವಿಲೇವಾರಿ ಮಾಡಿಲ್ಲ. ಇದರಿಂದ ಜಿಪಂ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ಹಳೆಯ ವಾಹನಗಳ ಬಳಕೆ ನಿಲ್ಲಿಸಿದಾಗಲೇ ಮಾರಾಟ ಮಾಡಿದ್ದರೆ ಅವುಗಳಿಗೆ ಕಿಂಚಿತ್ತಾ ದರೂ ಮೌಲ್ಯ ಸಿಗುತ್ತಿತ್ತು. ಆದರೆ, ಸಾರ್ವಜನಿಕ ಹಣ ಬಳಕೆ ಮಾಡಿ ಖರೀದಿ ಮಾಡಿರುವ ವಾಹನಗಳನ್ನು ಗಾಳಿ ಮಳೆಗೆ ತುಕ್ಕು ಹಿಡಿಯಲು ಬಿಟ್ಟಿ ರುವುದರಿಂದ ಈಗ ಅವು ಚಲಾವಣೆಗೆ ಸೂಕ್ತವಲ್ಲದ ಗುಜರಿ ವಸ್ತುಗಳಾಗಿವೆ.
ಎಂಬತ್ತರ ದಶಕದಲ್ಲಿ ನೋಂದಣಿ: ಜಿಪಂ ಆವ ರಣದಲ್ಲಿ ನಿಂತಿರುವ 13 ವಾಹನಗಳ ಪೈಕಿ ಕೇವಲ ಎಂಟು ವಾಹನಗಳಿಗೆ ಮಾತ್ರವೇ ನೋಂದಣಿ ದಾಖಲೆಗಳು ಲಭ್ಯವಾಗಿದ್ದು, ಈ ಪೈಕಿ ಒಂದೆರೆಡು ವಾಹನಗಳನ್ನು ಎಪ್ಪತ್ತು, ಎಂಬತ್ತರ ದಶಕದಲ್ಲಿ ನೋಂದಣಿ ಮಾಡಲಾಗಿದೆ. ಉಳಿದವು ತೊಂಬತ್ತರ ದಶಕದಲ್ಲಿ ನೋಂದಣಿಯಾಗಿವೆ. ಅಂದರೆ ಖರೀದಿಯ ನಂತರ ಹತ್ತಿಪ್ಪತ್ತು ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಹೊತ್ತು ತಿರುಗಿದ ವಾಹನಗಳು ಅಷ್ಟೇ ವರ್ಷಗಳ ಕಾಲ ಜಿಪಂ ಆವರಣದಲ್ಲಿ ದೂಳು ತಿನ್ನುವಂತಾಗಿದೆ.
ವಿಲೇವಾರಿಗೆ ಸಿದ್ಧತೆ: ಕೋಲಾರ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ರ ಗಮನಕ್ಕೆ ಈ ಹಳೆ ವಾಹನಗಳು ಬಂದಿದ್ದು, ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಡೀಸಿ ಕಚೇರಿಯಿಂದ ಅನುಮತಿ ಸಿಕ್ಕರೆ ಹಳೇ ವಾಹನಗಳಿಗೆ ಮುಕ್ತಿ ಸಿಗಲಿದೆ.
ಕೋಲಾರ ಜಿಪಂ ಹಳೆಯ ವಾಹನಗಳು ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ವಾಹನಗಳನ್ನು ಅನುಪಯುಕ್ತಗೊಳಿಸಲು ದೃಢೀಕರಿಸಲಾಗಿದೆ. ವಾಹನಗಳ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಲಾಗಿದೆ.
-ವಿಶ್ವಜೀತ್ ಮಲಾಜರೆ, ಮೋಟಾರು ವಾಹನ ನಿರೀಕ್ಷಕರು. ಆರ್‌ಟಿಒ
ಜಿಪಂ ಆವರಣದಲ್ಲಿರುವ ಹಳೆ ವಾಹನಗಳನ್ನು ಗಮನಿಸಿ ತುರ್ತು ವಿಲೇವಾರಿಗೆ ಸೂಚನೆ ನೀಡಿದ್ದೆ. ಆರ್‌ಟಿಒದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಡೀಸಿಯಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ. ಬಂದ ತಕ್ಷಣ ವಿಲೇವಾರಿ ಮಾಡಲಾಗುವುದು.
-ಸಿ.ಎಸ್.ವೆಂಕಟೇಶ್, ಜಿಪಂ ಅಧ್ಯಕ್ಷ, ಕೋಲಾರ
* ಕೆ.ಎಸ್.ಗಣೇಶ್