Advertisement

ಸಚಿವರ ಶಿಫಾರಸಿದ್ದರೂ ಬೆಳ್ಳಾರೆಗಿಲ್ಲ 108 ಆ್ಯಂಬುಲೆನ್ಸ್‌

11:14 AM Nov 15, 2018 | Team Udayavani |

ಬೆಳ್ಳಾರೆ: ಸಚಿವರ ಶಿಫಾರಸಿದ್ದರೂ, ಬೆಳ್ಳಾರೆಯಲ್ಲಿ ಪೂರ್ಣ ಪ್ರಮಾಣದಲ್ಲಿ 108 ಆ್ಯಂಬುಲೆನ್ಸ್‌ ವಾಹನ ಲಭ್ಯವಿಲ್ಲ. ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸಂದರ್ಭ ಬೆಳ್ಳಾರೆಗೆ 108 ಅನ್ನು ಮಂಜೂರುಗೊಳಿಸಿದ್ದರು. ಆ ವಾಹನವನ್ನು ಇಲಾಖೆಯ ಗಮನಕ್ಕೆ ತಾರದೆ ಬೇರೆಡೆಗೆ ವರ್ಗಾಯಿಸಿದ್ದರು. ಇದೀಗ ಮತ್ತೊಮ್ಮೆ ಸಚಿವರಲ್ಲಿ ನೂತನ ಆ್ಯಂಬುಲೆನ್ಸ್‌ಗಾಗಿ ಬೆಳ್ಳಾರೆ ನಾಗರಿಕರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮಂಜೂರಾತಿ ಶಿಫಾರಸು ಇದ್ದರೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ.

Advertisement

ವಾಹನ ದುರಸ್ತಿಯಾಗಿಲ್ಲ
ಬೆಳ್ಳಾರೆಯಲ್ಲಿ ಹಳೆಯದಾದ 108 ಆ್ಯಂಬುಲೆನ್ಸ್‌ ಇತ್ತು. ತುರ್ತು ಸಂದರ್ಭದಲ್ಲಿ ಪದೇ ಪದೇ ಕೈಕೊಡುತ್ತಿದ್ದುದರಿಂದ ದುರಸ್ತಿಗಾಗಿ ಗ್ಯಾರೇಜಿನಲ್ಲಿ ಇಡಲಾಗಿತ್ತು. ತಿಂಗಳಿನಿಂದಲೂ ಗ್ಯಾರೇಜಿನಲ್ಲಿಯೇ ಇರುವ ಆ್ಯಂಬುಲೆನ್ಸ್‌ ವಾಪಸಾಗಿಲ್ಲ. ಹೊಸ ಆ್ಯಂಬುಲೆನ್ಸ್‌ಗಾಗಿ ಬೆಳ್ಳಾರೆಯ ವರ್ತಕರ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಮಹಿಳಾ ಮಂಡಳಿಯಿಂದ ಮೌಖಿಕ ಮತ್ತು ಲಿಖಿತ ಬೇಡಿಕೆ ಇಡಲಾಗಿದೆ.

ಆ್ಯಂಬುಲೆನ್ಸ್‌ ಇಲ್ಲದೆ ಪ್ರಾಣಹಾನಿ
ಕಳೆದ ತಿಂಗಳಿನಲ್ಲಿ ಬೆಳ್ಳಾರೆ ಸಮೀಪದಲ್ಲಿ ಬಸ್‌-ಬೈಕ್‌ ಅಪಘಾತ ಸಂಭವಿಸಿದ ಸಂದರ್ಭ ಆ್ಯಂಬುಲೆನ್ಸ್‌ ಅಲಭ್ಯದಿಂದ ತುರ್ತು ಚಿಕಿತ್ಸೆ ದೊರೆಯದೆ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದರು. 

ಪ್ರತಿಭಟನೆಗೆ ಸಿದ್ಧತೆ 
ಬೆಳ್ಳಾರೆ ಜನತೆಗಾಗಿ ಶೀಘ್ರದಲ್ಲಿ 108 ಆ್ಯಂಬುಲೆನ್ಸ್‌ ಅನ್ನು ನೀಡದಿದ್ದರೆ ವರ್ತಕರ ಸಂಘ, ಮಹಿಳಾ ಸಂಘಗಳಿಂದ ತೀವ್ರತರವಾದ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದ್ದೇವೆ.
-ಪ್ರೇಮನಾಥ ಬೆಳ್ಳಾರೆ,
ವರ್ತಕರ ಸಂಘದ ಸದಸ್ಯ

ನನಗೆ ಅಧಿಕಾರವಿಲ್ಲ
ನಾನು ಖಾಸಗಿಯಾಗಿ ನೇಮಕಾತಿಯಾದವನು. ಇದರ ಕುರಿತು ನಿರ್ಧರಿಸಲು ನನಗೆ ಪೂರ್ಣ ಅಧಿಕಾರವಿಲ್ಲ. ಮೇಲಧಿಕಾರಿಗಳಿಂದ ಸೂಚನೆ ಬಂದಂತೆ ನಡೆದುಕೊಳ್ಳುವೆ.
-ಮಹಾಬಲ, 108 ಆ್ಯಂಬುಲೆನ್ಸ್‌ನ ಅಧಿಕಾರಿ

Advertisement

ಬಾಲಚಂದ್ರ ಕೋಟೆ 

Advertisement

Udayavani is now on Telegram. Click here to join our channel and stay updated with the latest news.

Next