ಹೊಸದಿಲ್ಲಿ : ಬಿಜೆಪಿಯ ಹಿರಿಯ ನಾಯಕರಲ್ಲಿ ಓರ್ವರಾಗಿರುವ ಮುರಲೀ ಮನೋಹರ ಜೋಷಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಭಾರತೀಯ ಜನತಾ ಪಕ್ಷ ತಾಕೀತು ಮಾಡಿದೆಯೇ ? ಇಂತಹ ಒಂದು ಗುಮಾನಿ ಹುಟ್ಟಿಸುವ ಪತ್ರವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಹಲವಾರು ಪಟ್ಟಿಗಳನ್ನು ಭಾರತೀಯ ಜನತಾ ಪಕ್ಷ ಈ ವರೆಗೆ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಪಕ್ಷದ ಇಬ್ಬರು ಹಿರಿಯ ನಾಯಕರಾಗಿರುವ ಲಾಲಕೃಷ್ಣ ಆಡ್ವಾಣಿ ಮತ್ತು ಮುರಲೀ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿರುವುದು ಸ್ಪಷ್ಟವಾಗಿದೆ. ಆಡ್ವಾಣಿ ಅವರ ಗುಜರಾತ್‌ನ ಗಾಂಧಿನಗರ ಕ್ಷೇತ್ರವನ್ನು ಈ ಬಾರಿ ಅಮಿತ್ ಶಾ ಈಗಾಗಲೇ ವಶಪಡಿಸಿಕೊಂಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಎಂ ಎಂ ಜೋಷಿ ಅವರು ತಮ್ಮ ವಾರಾಣಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟು ತಾನು ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಭಾರೀ ಬಹುಮತದೊಂದಿಗೆ ಗೆದ್ದಿದ್ದರು.
ಈ ಬಾರಿ ಕಾನ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಪಕ್ಷ ಈ ತನಕ ಪ್ರಕಟಿಸಿಲ್ಲ. ಈ ನಡುವೆ ಅಂತರ್ ಜಾಲದಲ್ಲಿ ಎಂ ಎಂ ಜೋಷಿ ಅವರ ಹೆಸರಿರುವ ಪತ್ರವೊಂದು ವೈರಲ್ ಆಗಿದೆ. ಈ ಪತ್ರವನ್ನು ಜೋಷಿ ಅವರ ಹೆಸರಲ್ಲಿ ಕಾನ್ಪುರದ ಜನರನ್ನು ಉದ್ದೇಶಿಸಿ ಬರೆಯಲಾಗಿರುವುದು ಕಂಡು ಬರುತ್ತದೆ.
ಪತ್ರದ ಹೂರಣ ಹೀಗಿದೆ : “ಕಾನ್ಪುರದ ಪ್ರಿಯ ಮತದಾರರೇ, ಬಿಜೆಪಿಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಶ್ರೀ ರಾಮಲಾಲ್ ಅವರು ನಾನು (ಜೋಶಿ) ಕಾನ್ಪುರದಿಂದಾಗಲೀ ಬೇರೆ ಎಲ್ಲಿಂದಾದರೂ ಆಗಲೀ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಕೂಡದೆಂದು ನನಗೆ ತಿಳಿಸಿದ್ದಾರೆ’.
ಜೋಷಿ ಹೆಸರಲ್ಲಿರುವ ಈ ಪತ್ರದ ಸಾಚಾತನವನ್ನು ದೃಢೀಕರಿಸಲಾಗಿಲ್ಲ. ಆದರೆ ಪತ್ರವಂತೂ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು ಕಾನ್ಪುರದ ಜನತೆ ತಮ್ಮ ಅಭ್ಯರ್ಥಿ ಯಾರೆಂಬುದನ್ನು ತಿಳಿಯಲು ಕಾತರರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.