ಹೊಸದಿಲ್ಲಿ : ಹರಿಯಾಣದ 31ರ ಹರೆಯದ ಅನು ಕುಮಾರಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ರಾಂಕ್ ಗಳಿಸಿದ್ದಾರೆ. ಮಹಿಳೆಯರಲ್ಲಿ ಆಕೆಯೇ ಟಾಪರ್ ಆಗಿ ಮೂಡಿ ಬಂದಿದ್ದಾರೆ.
ಅಂದ ಹಾಗೆ ವಿವಾಹಿತೆ ಅನು ಕಮಾರಿ ಅವರಿಗೆ 4 ವರ್ಷ ಪ್ರಾಯದ ಮಗವಿದೆ. ಮಗುವನ್ನು ಸಂಭಾಳಿಸುತ್ತಾ, ಮನೆವಾರ್ತೆ ಕರ್ತವ್ಯವನ್ನು ಪೂರೈಸುತ್ತಾ, ದಿನಕ್ಕೆ 10ರಿಂದ 12 ತಾಸು ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆಗೆ ಮೀಸಲಿಟ್ಟು ಎರಡನೇ ರಾಂಕ್ ಗಳಿಸುವಲ್ಲಿ ಸಫಲರಾಗಿರುವ ಅನು ಕುಮಾರಿ ಅವರ ಸಾಧನೆ ನಿಜಕ್ಕೂ ಅದ್ಭುತವಾದದ್ದು.
ಹಿಂದಿನ ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆಯನ್ನು ಅನು ಕುಮಾರಿ ಅವರು ಕೇವಲ ಒಂದು ಅಂಕದಿಂದ ಕಳೆದುಕೊಂಡಿದ್ದರು. ಆದರೆ ಅದರಿಂದ ಧೃತಿಗೆಡದೆ ತನ್ನ ಗುರಿಯನ್ನು ಸಾಧಿಸುವ ದೃಢ ಸಂಕಲ್ಪಕ್ಕೆ ಕಟಿಬದ್ಧರಾದರು.
“ನಾನಿರುವ ಹಳ್ಳಿಯಲ್ಲಿ ಯಾವುದೇ ಸುದ್ದಿ ಪತ್ರಿಕೆಗಳು ಬರುತ್ತಿರಲಿಲ್ಲ; ಹಾಗಾಗಿ ನನಗೆ ಸಾಮಾನ್ಯ ಜ್ಞಾನದ ಯಾವುದೇ ಮಾಹಿತಿಗಳನ್ನು ಕಲೆ ಹಾಕುವುದು ಸಾಧ್ಯವಿರುತ್ತಿರಲಿಲ್ಲ; ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದದ್ದು ಯುಪಿಎಸ್‌ಸಿ ಸಿದ್ಧತೆಗಾಗಿನ ಆನ್‌ಲೈನ್ ಕಂಟೆಟ್‌ಗಳು. ಅದೇನಿದ್ದರೂ ಗುರಿ ಸಾಧಿಸುವ ಛಲ ಮತ್ತು ದೃಢ ಸಂಕಲ್ಪವೇ ನಮ್ಮ ಯಶಸ್ಸಿಗೆ ಕಾರಣವಾಗುವುದೆಂಬುದನ್ನು ನಾನು ನನ್ನ ಪ್ರಯತ್ನದಲ್ಲಿ ಕಂಡುಕೊಂಡೆ. ಒಂದು ವೇಳೆ ನೀವು ಕೂಡ ಈ ದೃಢ ಚಿತ್ತ, ಸಂಕಲ್ಪ, ಕಠಿನ ಪರಿಶ್ರಮ ಮತ್ತು ಆಸಕ್ತಿಯನ್ನು ಬೆಳೆಸಿಕೊಂಡದ್ದೇ ಆದರೆ ನಿಮ್ಮನ್ನು ಮತ್ತೆ ಯಾರೂ ತಡೆಯುವುದು ಸಾಧ್ಯವಿಲ್ಲ’ ಎಂದು ಅನು ಕಮಾರಿ ಹೇಳುತ್ತಾರೆ.
“ನಾನು ಐಎಎಸ್ ಅಧಿಕಾರಿಯಾದಾಗ ದೇಶದಲ್ಲಿನ ಮಹಿಳೆಯರ ಸುರಕ್ಷೆಯೇ ನನ್ನ ಆದ್ಯ ಕರ್ತವ್ಯವಾಗುತ್ತದೆ” ಎಂದು ಅನು ಕುಮಾರಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದಿರುವ ತೆಲಂಗಾಣದ ದುರಿಶೆಟ್ಟಿ ಅವರಂತೆ ಅನು ಕುಮಾರಿ ಕೂಡ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗಿಲ್ಲ. ಅನುಕುಮಾರಿ ಅವರು ದಿಲ್ಲಿ ವಿವಿಯಲ್ಲಿ ಫಿಸಿಕ್ಸ್ ಓದಿದ್ದಾರೆ; ಐಎಂಟಿ ನಾಗ್ಪುರದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಅನು ಕುಮಾರಿ ಅವರನ್ನು ಅಭಿನಂದಿಸಿದ್ದಾರೆ. ಹರಿಯಾಣದ ಹುಡುಗಿಯರು ಅನು ಕುಮಾರಿಯ ಸಿದ್ಧಿ – ಸಾಧನೆಯಿಂದ ಸ್ಫೂರ್ತಿ ಪಡೆಯಲೆಂದು ಟ್ವಿಟರ್‌ನಲ್ಲಿ ಹಾರೈಸಿದ್ದಾರೆ.