ಚಂಡೀಗಢ: ಭಾರೀ ಮಳೆ, ಪ್ರವಾಹದ ಸ್ಥಿತಿಗತಿಯನ್ನು ವೀಕ್ಷಿಸಲು ತೆರಳಿದ್ದ ಜನನಾಯಕ್ ಜನತಾ ಪಕ್ಷ(JJP)ದ ಶಾಸಕ ಈಶ್ವರ್ ಸಿಂಗ್ ಅವರಿಗೆ ಆಕ್ರೋಶಗೊಂಡ ಮಹಿಳೆಯೊಬ್ಬರು ಸಾರ್ವಜನಿಕವಾಗಿಯೇ ಕಪಾಳಮೋಕ್ಷ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:Sagara: ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಚೋದನೆ ನೀಡಿದ ಆರೋಪಿ ಬಂಧನ
ಹರ್ಯಾಣದ ಘುಲಾ ಪ್ರದೇಶದಲ್ಲಿ ಘಾಗ್ಗರ್ ನದಿ ಉಕ್ಕಿ ಹರಿದ ಪರಿಣಾಮ ಆ ಪ್ರದೇಶವೆಲ್ಲಾ ಪ್ರವಾಹದ ನೀರಿನಿಂದ ತುಂಬಿ ಹೋಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಶಾಸಕ ಈಶ್ವರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ, ಈಗ ಯಾಕೆ ಬಂದಿದ್ದೀರಿ? ಎಂದು ಪ್ರಶ್ನಿಸಿ ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದು, ಆ ಕೂಡಲೇ ಪೊಲೀಸ್ ಅಧಿಕಾರಿ ಆಕೆಯನ್ನು ಹಿಂದಕ್ಕೆ ತಳ್ಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಶಾಸಕರ ಸುತ್ತಮುತ್ತ ಜನರು ಗುಂಪುಗೂಡಿದ್ದು, ಈ ಸಂದರ್ಭದಲ್ಲಿ ಆಕ್ರೋಶಗೊಂಡ ಮಹಿಳೆ ಶಾಸಕರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಆಕೆ ತನ್ನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿಲ್ಲ. ಆದರೂ ಆಕೆ ಕಪಾಳಮೋಕ್ಷ ಮಾಡಿರುವ ಬಗ್ಗೆ ಮಹಿಳೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಜೆಜೆಪಿ ಹರ್ಯಾಣದ ಆಡಳಿತರೂಢ ಬಿಜೆಪಿ ನೇತೃತ್ವ ಸರ್ಕಾರದ ಮೈತ್ರಿ ಪಕ್ಷವಾಗಿದೆ. ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹರ್ಯಾಣದದಲ್ಲಿ ಹಲವು ಗ್ರಾಮಗಳು ಪ್ರವಾಹದಿಂದ ಜನರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.