ಅಹ್ಮದಾಬಾದ್: ಪ್ರೊ ಕಬಡ್ಡಿಯಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದೆ. ಮೊದಲೇ ಕಳಪೆ ಫಾರ್ಮ್ನಲ್ಲಿರುವ ಹರ್ಯಾಣ ಸ್ಟೀಲರ್ ತಂಡವನ್ನು 40-31 ಅಂತರದಿಂದ ಸೋಲಿಸಿದೆ.
ಗುರುವಾರದ ಈ ಜಯದೊಂದಿಗೆ “ಎ’ ವಲಯದ ಅಗ್ರಸ್ಥಾನಕ್ಕೆ ನೆಗೆದಿರುವ ಗುಜರಾತ್ ಪ್ಲೇಆಫ್ ಪ್ರವೇಶಿಸುವುದು ಖಚಿತವಾಗಿದ್ದರೆ, ಹರ್ಯಾಣದ ಮುಂದಿನ ಹಾದಿ ಬಹುತೇಕ ಅಂತ್ಯವಾಗಿದೆ.
ಎಂದಿನಂತೆ ಗುಜರಾತ್ ಆಟಗಾರರು ಅದ್ಭುತ ಆಟ ಮುಂದುವರಿಸಿದರು. ತಂಡದ ಜಯಕ್ಕೆ ಕಾರಣರಾದವರು ಸಚಿನ್ ಮತ್ತು ಪರ್ವೇಶ್ ಭೈನ್ಸ್‌ವಾಲ್. 18 ಬಾರಿ ಸ್ಟೀಲರ್ ಕೋಟೆಗೆ ಕಾಲಿಟ್ಟ ಸಚಿನ್ 10 ಅಂಕ ಗಳಿಸುವ ಮೂಲಕ ಮೆರೆದಾಡಿದರು. ಇವರಿಗೆ ರಕ್ಷಣೆಯಲ್ಲಿ ನೆರವಾಗಿದ್ದು ಪರ್ವೇಶ್. 6 ಬಾರಿ ಯಶಸ್ವಿಯಾಗಿ ಎದುರಾಳಿ ದಾಳಿಗಾರನನ್ನು ತಮ್ಮ ಅಂಕಣದೊಳಕ್ಕೆ ಕೆಡವಿಕೊಂಡ ಪರ್ವೇಶ್ ಸರಿಯಾಗಿ 6 ಅಂಕ ಗಳಿಸಿದರು. ಈ ಇಬ್ಬರಿಗೆ ಉಳಿದವರು ಸಂಘಟಿತರಾಗಿ ಬೆಂಬಲ ನೀಡಿದ್ದರಿಂದ ಗುಜರಾತ್ ಗೆಲುವು ಸಾಧ್ಯವಾಯಿತು.
ಹರ್ಯಾಣ ಪರ ಖ್ಯಾತ ತಾರೆ ಮೋನು ಗೋಯತ್ ಅತ್ಯುತ್ತಮವಾಗಿ ಆಡಿದರು. 16 ಬಾರಿ ಗುಜರಾತ್ ಅಂಕಣಕ್ಕೆ ನುಗ್ಗಿದ ಅವರು 10 ಅಂಕ ಗಳಿಸಿದರು. ಇವರಿಗೆ ವಿಕಾಸ್ ಖಂಡೋಲ ದಾಳಿಯಲ್ಲಿ ನೆರವು ನೀಡಿದರು. ಆದರೂ ಇದು ಗೆಲುವಿಗೆ ಸಾಕಾಗಲಿಲ್ಲ.
ಇಂದಿನಿಂದ ಪುಣೆಯಲ್ಲಿ ಬೆಂಗಳೂರು ಚರಣ
ಬೆಂಗಳೂರು ಬುಲ್ಸ್ ಆತಿಥೇಯತ್ವದ ಪಂದ್ಯಗಳು ಶುಕ್ರವಾರದಿಂದ ಪುಣೆಯಲ್ಲಿ ಆರಂಭವಾಗಲಿವೆ. ವಾಸ್ತವವಾಗಿ ಈ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಬೇಕಿತ್ತು. ಆದರೆ ರಾಜ್ಯ ಕ್ರೀಡಾ ಇಲಾಖೆ ಹಾಗೂ ಬೆಂಗಳೂರು ಬುಲ್ಸ್ ನಡುವೆ ಸೂಕ್ತ ಸಮನ್ವಯ ಸಾಧ್ಯವಾಗದೇ ಇದ್ದಿದ್ದರಿಂದ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿವೆ. ನ. 29ರ ತನಕ ಇಲ್ಲಿ ಪಂದ್ಯಗಳು ನಡೆಯಲಿವೆ.