ಫರೀದಾಬಾದ್ : ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟದ ಬಗ್ಗೆ ಈಗಲೂ ಸಂದೇಹಗಳು ಉಳಿದಿದ್ದು ಇದಕ್ಕೆ ಪೂರಕವಾಗಿ ಹರಿಯಾಣದ ಫರೀದಾಬಾದ್‌ನ ಸರಕಾರಿ ರಾಜ್‌ಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನ ಮಕ್ಕಳಿಗೆ ಉಣಬಡಿಸಲಾದ ಮಧ್ಯಾಹ್ನದ ಊಟದಲ್ಲಿ ಉದ್ದನೆಯ ಸತ್ತ ಮರಿ ಹಾವು ಇರುವುದು ಕಂಡುಬಂದಿದೆ.
ಮಧ್ಯಾಹª ಊಟದಲ್ಲಿ ಸತ್ತ ಮರಿ ಹಾವು ಇರುವುದು ಕಂಡುಬಂದೊಡನೆಯೇ ಮಕ್ಕಳು ಊಟ ಸೇವಿಸುವುದನ್ನು ತತ್‌ಕ್ಷಣವೇ ನಿಲ್ಲಿಸಿದರು. ಆದರೆ ಅಷ್ಟರೊಳಗಾಗಿ ಕೆಲವು ಮಕ್ಕಳು ಆಹಾರವನ್ನು ಸೇವಿಸಿಯಾಗಿತ್ತು. ಸತ್ತ ಹಾವು ಇದ್ದ ಆಹಾರವನ್ನು ಸೇವಿಸಿದ ಕೆಲವು ಮಕ್ಕಳಿಗೆ ತತ್‌ಕ್ಷಣವೇ ವಾಂತಿ ಉಂಟಾಗಿ ಅವರು ಅಸ್ವಸ್ಥರಾದರು.
ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಮಕ್ಕಳಿಗೆ ಊಟ ಬಡಿಸುವ ಮುನ್ನ ಅದರ ರುಚಿಯನ್ನು ಪರೀಕ್ಷಿಸಲು ಸ್ವಲ್ಪ ಪ್ರಮಾಣದ ಆಹಾರವನ್ನು ಸೇವಿಸಿದ್ದರು. ಆ ಹೊತ್ತಿಗೆ ಆಹಾರದಲ್ಲಿ ಸತ್ತ ಮರಿ ಹಾವು ಇರುವುದು ಕಂಡು ಬಂತು. ಒಡನೆಯೇ ಅವರು ಯಾರೂ ಆಹಾರ ಸೇವಿಸಕೂಡದೆಂದು ಹೇಳಿಕಳುಹಿಸಿದರು.
“ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಇದೆ ಎಂದು ತಿಳಿದೊಡನೆಯೇ ನಾವು ಆಘಾತಗೊಂಡೆವು. ನಮಗೆ ಮೊದಲೇ ಆಹಾರದಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು. ಏನೋ ಎಡವಟ್ಟಾಗಿದೆ ಎಂಬ ಗುಮಾನಿ ಬಂದಿತ್ತು. ಅಷ್ಟರೊಳಗಾಗಿ ಆಹಾರದಲ್ಲಿ ಸತ್ತ ಮರಿ ಹಾವು ಇದೆ; ಯಾರೂ ಆಹಾರ ಸೇವಿಸಬಾರದು ಎಂಬ ಸೂಚನೆ ಶಿಕ್ಷಕರಿಂದ ಬಂತು. ಇದನ್ನು ಕೇಳಿ ನಾವು ಭಯಭೀತರಾದೆವು’ ಎಂದು ಶಾಲೆಯ ಮಕ್ಕಳು ಹೇಳಿದರು.
ಶಾಲೆಯ ಪ್ರಾಂಶುಪಾಲರಾಗಿರುವ ಬೃಜ್ ಬಾಲಾ ಅವರು ಕೂಡಲೇ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ಹಾಗೂ ಶಾಲೆಗೆ ಮಧ್ಯಾಹ್ನದ ಊಟ ಪೂರೈಸುವ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್‌ಗೆ ತಿಳಿಸಿದರು.