Advertisement
ಮುಂಬಯಿ/ಚಂಡೀಗಢ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಗೆ ಸಿಹಿ ಮತ್ತು ಕಹಿಯ ಮಿಶ್ರ ಅನುಭವವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಡಳಿತಕ್ಕೆ ಜನ ಜೈ ಅಂದಿದ್ದರೂ, ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ. ಈ ಬಾರಿ ಸ್ವತಂತ್ರವಾಗಿಯೇ 145ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ಹೊಂದಿದ್ದ ಬಿಜೆಪಿಯ ಕನಸಿಗೆ ಮತದಾರ ಸೈ ಅಂದಿಲ್ಲ. ಆದರೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟಕ್ಕೆ 161 ಸ್ಥಾನ ಗಳನ್ನು ನೀಡುವ ಮೂಲಕ ಸರಕಾರ ರಚನೆಗೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ.
ಎರಡೂ ರಾಜ್ಯಗಳಲ್ಲೂ ಸರಕಾರ ರಚನೆಯ ಕಸರತ್ತು ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಚೌಕಾಸಿ ಶುರು ಮಾಡಿದೆ. ಈ ಬಾರಿ 50-50ರ ಮಾದರಿಯಲ್ಲೇ ಸರಕಾರ ರಚನೆಯಾಗಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಟ್ಟು ಹಿಡಿದಿದ್ದಾರೆ. ಅಂದರೆ ಸಚಿವ ಸ್ಥಾನದಲ್ಲೂ ಅರ್ಧ ಮತ್ತು ಮುಖ್ಯಮಂತ್ರಿ ಸ್ಥಾನವೂ ತಲಾ ಎರಡೂವರೆ ವರ್ಷ ಸಿಗಬೇಕು ಎಂದಿದ್ದಾರೆ. ಸೀಟು ಹಂಚಿಕೆಯಲ್ಲಿ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆವು ಎಂದಾಕ್ಷಣ ಸರಕಾರ ರಚನೆ ಸಂದರ್ಭದಲ್ಲೂ ಬಾಗುತ್ತೇವೆ ಎಂದರ್ಥವಲ್ಲ ಎಂದಿದ್ದಾರೆ.
Related Articles
ಹರಿಯಾಣದಲ್ಲಿ ಯಾರೊಬ್ಬರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಸರಕಾರ ರಚನೆಯ ಜಂಜಾಟ ಶುರುವಾಗಿದೆ. ಮುಖ್ಯಮಂತ್ರಿ ಮನೋಹರ್ ಖಟ್ಟರ್ ಅವರು ಗುರುವಾರ ಸಂಜೆಯೇ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿಗೆ ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ನೀಡುವ ಸಾಧ್ಯತೆ ಇದೆ. ಇದರ ನಡುವೆಯೇ ಕಾಂಗ್ರೆಸ್ ಕೂಡ ಸರಕಾರ ರಚನೆಯ ಕಸರತ್ತು ಶುರು ಮಾಡಿದ್ದು, ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಅವರ ಓಲೈಕೆಯಲ್ಲಿ ತೊಡಗಿದೆ. ಆದರೆ ಚೌಟಾಲ ಮಾತ್ರ ಯಾರ ಕಡೆಗೂ ಇನ್ನೂ ವಾಲಿಲ್ಲ.
Advertisement
ಮಹಾರಾಷ್ಟ್ರ ಮತ್ತು ಹರಿಯಾಣದ ಜನ ಅಲ್ಲಿನ ಸಿಎಂಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಮುಂದೆಯೂ ಅವರಿಬ್ಬರೂ ಇನ್ನಷ್ಟು ಶ್ರಮದಿಂದ ಕೆಲಸ ಮಾಡಲಿದ್ದಾರೆ.-ನರೇಂದ್ರ ಮೋದಿ, ಪ್ರಧಾನಿ