ಚಂಢೀಗಡ: ಆಕ್ಟೋಬರ್ 21 ರಂದು ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ರಾಜ್ಯದ ರೈತರ ಸಾಲಮನ್ನಾ , ಮಹಿಳೆಯರಿಗೆ ಶೇ 33 ರಷ್ಟು ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಸೇರಿದಂತೆ ಭರಪೂರ ಭರವಸೆ ನೀಡಿದೆ.
ಬರ ಮತ್ತು ನೈಸರ್ಗಿಕ ವಿಕೋಪದ ಕಾರಣದಿಂದ ರೈತರ ಬೆಳೆ ಹಾನಿಯಾದ ಹಿನ್ನಲೆಯಲ್ಲಿ ಏಕರೆಗೆ 12,000 ರೂ ಪರಿಹಾರ ನೀಡುವುದಾಗಿ ಮಾಜಿ ಕೇಂದ್ರ ಸಚಿವ ಗುಲಾಂ ನಭಿ ಅಜಾದ್ 22 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ತಿಳಿಸಿದರು.
ಪಕ್ಷ ಅಧಿಕಾರಕ್ಕೇರಿದರೇ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಅದರ ಜೊತೆಗೆ ಬೆಳೆ ವಿಮೆಯ ಮೇಲೆ ಯಾವುದೇ ರೀತಿಯ ಪ್ರೀಮಿಯಂ ಇರುವುದಿಲ್ಲ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಉದ್ಯೋಗದ ಭರವಸೆ ನೀಡಲಾಗುವುದು. ಹರಿಯಾಣ ಮಾರ್ಗಗಳಲ್ಲಿ ಸಂಚರಿಸುವ ಬಸ್ ಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಉಚಿತ ಪ್ರಯಾಣ ಮತ್ತು 3,500 ರೂ ಗಳ ಭತ್ಯೆ. ಹಾಗೂ 5 ವರ್ಷದೊಳಗಿನ ಮಕ್ಕಳಿರುವ ಮಹಿಳೆಯರಿಗೆ 5000 ರೂ. ನೀಡಲಾಗುವುದು ಎಂದು ತಿಳಿಸಿದರು.
ಅದರ ಜೊತೆಗೆ ಪಂಚಾಯತ್ ರಾಜ್ ಇಲಾಖೆ , ಪುರಸಭೆ ಮತ್ತು ನಗರ ಸಭೆಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ . ನಿರುದ್ಯೋಗ ಯುವಕರಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯ ಅರ್ಹತೆಯ ಆಧಾರದ ಮೇಲೆ ಪ್ರತಿ ಉಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಮತ್ತು ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿಗಳಿಗೆ ತಿಂಗಳಿಗೆ 10.00 ರೂ ಭತ್ಯೆ ಮತ್ತು ಪದವಿ ನಿರುದ್ಯೋಗಿಗಳಿಗೆ 7000 ರೂ . ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.